ಕಾರ್ಮಿಕ ಇಲಾಖೆ, ಶಾಲಾ ಮಕ್ಕಳ ಕಿಟ್ ನಲ್ಲೂ ಭ್ರಷ್ಟಾಚಾರ: ಕಾಂಗ್ರೆಸ್ ಆರೋಪ
ಬೆಂಗಳೂರು, ಮಾ.3 : ರಾಜ್ಯ ಸರಕಾರ ಕಾರ್ಮಿಕ ಇಲಾಖೆ ಕಿಟ್ ನಲ್ಲೂ ಭ್ರಷ್ಟಾಚಾರ ನಡೆಸಿದ್ದು, ಜನರ ತೆರಿಗೆ ಹಣವನ್ನು ಶೇ.40ರಷ್ಟು ಕಮಿಷನ್ ರೂಪದಲ್ಲಿ ತಿನ್ನುತ್ತಿದೆ”ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಅವರು, ಸರಕಾರದ ಬಳಿ ಯಾವ ತರಗತಿಯಲ್ಲಿ ಎಷ್ಟು ಜನ ನೊಂದಾಯಿತ ಕಾರ್ಮಿಕ ಮಕ್ಕಳಿದ್ದಾರೆಂಬ ಅಂಕಿ ಅಂಶಗಳು ಇಲ್ಲ. ಸಮೀಕ್ಷೆ ನಡೆಸದೆ, ಅಂಕಿ-ಅಂಶಗಳು ಇಲ್ಲದೆ ಈ ಟೆಂಡರ್ ಕರೆದಿದ್ದಾರೆ. ಇದು ಆಡಳಿತ ನಡೆಸುವ ರೀತಿಯೇ? ಇದು ಕಾರ್ಮಿಕರ ಅಭಿವೃದ್ಧಿಗೆ ತೆಗೆದುಕೊಂಡಿರುವ ತೀರ್ಮಾನವೇ? ಸಾಮಾನ್ಯವಾಗಿ ಸಮೀಕ್ಷೆ ಮಾಡಿ ನಂತರ ಎಷ್ಟು ಮಕ್ಕಳಿದ್ದಾರೆ ಎಂದು ಅಂಕಿ-ಅಂಶ ಪಡೆದು ಆ ನಂತರ ಟೆಂಡರ್ ಕರೆಯಬೇಕು. ಆದರೆ ಇಲ್ಲಿ ಯಾವುದೇ ಮಾಹಿತಿ ಇಲ್ಲದೇ ಈ ಟೆಂಡರ್ ಕರೆದಿದ್ದಾರೆ. ಈ ಇಲಾಖೆ ಕಾರ್ಮಿಕರ ಏಳಿಗೆಗಾಗಿ ಏನು ಮಾಡುತ್ತಿದ್ದಾರೆ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಇಲಾಖೆಯ ಟೆಂಡರ್ ದಾಖಲೆಯಲ್ಲಿ ‘ಯಾರು ಟೆಂಡರ್ ಪಡೆಯುತ್ತಾರೆಯೋ ಅವರೇ ಮೂರನೆ ವ್ಯಕ್ತಿ ನೇಮಿಸಿ ಸಮೀಕ್ಷೆ ಹಾಗೂ ಗುಣಮಟ್ಟದ ಪರೀಕ್ಷೆ ಮಾಡಿಸಿ ಸರಕಾರಕ್ಕೆ ಪತ್ರ ನೀಡಬೇಕು. ಆದರೆ, ನಿಯಮ ಉಲ್ಲಂಘಿಸಿ ಭ್ರಷ್ಟಾಚಾರ ನಡೆಸಲಾಗಿದೆ. `ಬಂಡಿ ಅನ್ನ ತಿನ್ನುವ ಬಕಾಸುರನ ಮಾದರಿಯಲ್ಲೇ ರಾಜ್ಯ ಬಿಜೆಪಿ ಸರಕಾರ ರಾಜ್ಯದ ಜನರ ತೆರಿಗೆ ಹಣವನ್ನು ಶೇ.40 ದಷ್ಟು ಕಮಿಷನ್ ರೂಪದಲ್ಲಿ ತಿನ್ನುತ್ತಿದೆ. ಶಾಲಾ ಕಿಟ್ ಗಳನ್ನು ಕಾರ್ಮಿಕರ ಮಕ್ಕಳ ಪೈಕಿ 5ನೆ ತರಗತಿಯ ವರಿಗೆ ಮೊದಲು ನೀಡಿ, ನಂತರ ಉಳಿದರೆ 4, 3, 2, 1 ರಂತೆ ತರಗತಿ ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಹೇಳಿದೆ. ಹಾಗಿದ್ದರೆ ಇದನ್ನು ಕೇವಲ 5ನೆ ತರಗತಿಗೆ ಎಂದು ಟೆಂಡರ್ ಕರೆಯಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಅವರು ಮಾತನಾಡಿ, ‘ಕಾರ್ಮಿಕ ಇಲಾಖೆಯಲ್ಲಿ ಆಗಿರುವ 250 ಕೋಟಿ ರೂ.ಮೌಲ್ಯದ ಕಿಟ್ ಗಳ ಹಗರಣದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಕಾರ್ಮಿಕರ ಇಲಾಖೆಯಲ್ಲಿ 7-8 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದ್ದು, ಅದರ ಮೊದಲ ಭಾಗ ಈ ಹಗರಣವಾಗಿದೆ. ಸಿಎಂ ಹಾಗೂ ಮಂತ್ರಿಗಳು ದಾಖಲೆ ಕೇಳುತ್ತಾರೆ. ನಾವು ಇಂದು ದಾಖಲೆ ಸಮೇತ ಎಲ್ಲಾ ವಿಚಾರ ಮಾಧ್ಯಮಗಳ ಮುಂದೆ ಮುಂದಿಡುತ್ತೇವೆ ಎಂದರು.
ಇದೇ ವೇಳೆ ‘ಶಾಲಾ ಮಕ್ಕಳು ಹಾಗೂ ಕಾರ್ಮಿಕರಿಗೆ ನೀಡಿರುವ ಕಿಟ್ ಗಳಲ್ಲೂ ಇವರು ಅಕ್ರಮ ಮಾಡುತ್ತಿದ್ದಾರೆ ಇದು ನಾಚಿಕೆಗೇಡಿನ ವಿಚಾರ ಎಂದ ಅವರು, ದಾಖಲೆ ಕೇಳುವ ಸಿಎಂ ಸಮಯ ಕೊಟ್ಟರೆ ಈ ದಾಖಲೆಗಳನ್ನು ಅವರ ಕಚೇರಿ, ನಿವಾಸಕ್ಕೆ ನೀಡಲು ಸಿದ್ಧವಿದ್ದೇವೆ. ಈ ಕಿಟ್ ದರ ಎಷ್ಟಿದೆ, ಇಲ್ಲಿ ಕಮಿಷನ್ ಎಷ್ಟು ಪಡೆಯಲಾಗಿದೆ ಎಂದು ಅವರೇ ಪರಿಶೀಲಿಸಿ, ಕನಿಷ್ಠ ನೈತಿಕತೆ ಇದ್ದರೆ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಲಿ’ ಎಂದರು ಹಾಗೂ ಮಾರುಕಟ್ಟೆಯಲ್ಲಿ ಒಂದು ಪೆನ್ಸಿಲ್ ಬಾಕ್ಸ್ ಮೌಲ್ಯ 100 ರೂ. ಇದ್ದರೆ, ಇವರು 200 ರೂ.ಹಾಕಿದ್ದಾರೆ. ಇವರು ಶಾಲಾ ವಿದ್ಯಾರ್ಥಿಗಳಿಗೆ ನೀಡಿರುವ ಕಿಟ್ ಮೌಲ್ಯ 3,650 ರೂ.ಆಗಿದೆ. ಆದರೆ ಇವರು 7,300 ರಿಂದ 9ಸಾವಿರ ರೂ.ವರೆಗೆ ದಾಖಲು ಮಾಡಿದ್ದಾರೆ. ಇನ್ನು ಉಳಿದ ಎಲೆಕ್ಟ್ರಿಷಿಯನ್ ಉಪಕರಣ 6,904 ರೂ. ನಿಗದಿ ಮಾಡಿದ್ದು, ಇದರಲ್ಲಿ ಇರುವ ವಸ್ತುಗಳ ಬೆಲೆ 2,960 ರೂ.ಮೌಲ್ಯದ್ದಾಗಿದೆ ಎಂದು ಅವರು ಟೀಕಿಸಿದರು.