ಹುಡುಗ, ಹುಡುಗಿ ಬೇರೆ ಧರ್ಮದವರೆಂಬ ಮಾತ್ರಕ್ಕೆ ‘ಲವ್ ಜಿಹಾದ್’ ಎನ್ನಲಾಗದು: ಬಾಂಬೆ ಹೈಕೋರ್ಟ್
ಮುಂಬೈ ಮಾ.2 : ಹುಡುಗ ಮತ್ತು ಹುಡುಗಿ ಬೇರೆ ಬೇರೆ ಧರ್ಮಗಳಿಗೆ ಸೇರಿದವರೆಂಬ ಮಾತ್ರಕ್ಕೆ ಒಂದು ಸಂಬಂಧವನ್ನು ʻಲವ್ ಜಿಹಾದ್ʼ ಎನ್ನಲಾಗದು ಎಂದು ಬಾಂಬೆ ಹೈಕೋರ್ಟಿನ ಔರಂಗಾಬಾದ್ ಪೀಠ ಹೇಳಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ನ್ಯಾಯಾಲಯ, “ಈ ಪ್ರಕರಣಕ್ಕೆ ಲವ್ ಜಿಹಾದ್ ಬಣ್ಣ ನೀಡಲು ಯತ್ನಿಸಲಾಗುತ್ತಿದೆ ಅದರೆ ಪ್ರೀತಿಯನ್ನು ಒಪ್ಪಿಕೊಂಡಾಗ ಒಬ್ಬ ವ್ಯಕ್ತಿಯನ್ನು ಇನ್ನೊಂದು ಧರ್ಮಕ್ಕೆ ಮತಾಂತರಿಸಲು ಆಮಿಷವೊಡ್ಡುವ ಸಾಧ್ಯತೆ ಕಡಿಮೆ ಎಂದು ಹೇಳಿದೆ. ಹಾಗೂ ಮುಸ್ಲಿಂ ಮಹಿಳೆ ಮತ್ತಾಕೆಯ ಕುಟುಂಬಕ್ಕೆ ನ್ಯಾಯಮೂರ್ತಿಗಳಾದ ವಿಭಾ ಕಂಕನ್ವಾಡಿ ಹಾಗೂ ಅಭಯ್ ವಘಾಸೆ ಅವರ ವಿಭಾಗೀಯ ಪೀಠ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದೆ.
ಔರಂಗಾಬಾದ್‌ನ ಸ್ಥಳೀಯ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ನಂತರ ಅರ್ಜಿದಾರರು ಬಾಂಬೆ ಹೈಕೋರ್ಟ್ ಕದ ತಟ್ಟಿದ್ದರು.
ಮಹಿಳೆ ಮತ್ತಾಕೆಯ ಕುಟುಂಬ ತನಗೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಮತ್ತು ಸುನ್ನತ್ ಮಾಡಲು ಬಲವಂತಪಡಿಸಿತ್ತು ಎಂದು ಮಹಿಳೆಯ ಮಾಜಿ ಪ್ರೇಮಿ ಆರೋಪಿಸಿದ್ದ.
ಆರೋಪಿಗಳ ಜಾಮೀನು ಅರ್ಜಿಯನ್ನು ವಿರೋಧಿಸಿದ ದೂರುದಾರನ ಪರ ವಕೀಲರು, ಇದೊಂದು ಲವ್ ಜಿಹಾದ್ ಪ್ರಕರಣವೆಂದು ವಾದಿಸಿದ್ದರು. ಆದರೆ ಲವ್ ಜಿಹಾದ್ ವಾದವನ್ನು ತಿರಸ್ಕರಿಸಿದ ಹೈಕೋರ್ಟ್, ಮಹಿಳೆಯ ಜೊತೆ ತನಗೆ ಸಂಬಂಧವಿರುವುದನ್ನು ಅರ್ಜಿದಾರ ಒಪ್ಪಿಕೊಂಡಿದ್ದು ಹಾಗೂ ಸಂಬಂಧ ಮುರಿಯಲು ಹಲವು ಅವಕಾಶಗಳಿದ್ದರೂ ಹಾಗೆ ಮಾಡಿರಲಿಲ್ಲ ಎಂಬ ಎಫ್‌ಐಆರ್‌ನಲ್ಲಿದ್ದ ಮಾಹಿತಿಯನ್ನು ನ್ಯಾಯಾಲಯ ಉಲ್ಲೇಖಿಸಿದೆ.