ತ್ರಿಪುರ ಮೈತ್ರಿಕೂಟ, ನಾಗಾಲ್ಯಾಂಡ್ ಎನ್.ಡಿ.ಪಿ.ಪಿ, ಮೇಘಾಲಯ ಎನ್.ಪಿ.ಪಿ ಮುನ್ನಡೆ
ನವದೆಹಲಿ ಮಾ.2: ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದ್ದು ಈ ಮೂರು ಕ್ಷೇತ್ರಗಳ ಫಲಿತಾಂಶದ ಕಡೆಗೆ ಎಲ್ಲರ ಚಿತ್ತ ನೆಟ್ಟಿದೆ.
ಇಂದು ಬೆಳಿಗ್ಗೆ 8ರಿಂದ ಮತ ಎಣಿಕೆ ಆರಂಭವಾಗಿದ್ದು, ಒಟ್ಟು ಐದರಿಂದ ಎಂಟು ಸುತ್ತು ಮತ ಎಣಿಕೆ ನಡೆಯಲಿದೆ. ಒಟ್ಟಾರೆಯಾಗಿ ಮಧ್ಯಾಹ್ನದ ನಂತರ ಮತದಾರರ ಒಲವು ಯಾವ ಕಡೆಗಿದೆ ಎಂದು ಸ್ಪಷ್ಟವಾಗಬಹುದು.
ತ್ರಿಪುರಾ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 60 ಕ್ಷೇತ್ರಗಳ ಪೈಕಿ ಬಿಜೆಪಿ ಮೈತ್ರಿಕೂಟ 30 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಉಳಿದಂತೆ ತಿಪ್ರಾ ಮೋತಾ 11, ಸಿಪಿಎಂ 18, ಇತರೆ 1 ಕ್ಷೇತ್ರಗಳಲ್ಲಿ ಸ್ಥಾನ ಪಡೆದುಕೊಂಡಿದೆ.
ನಾಗಾಲ್ಯಾಂಡ್ ವಿಧಾನ ಸಭಾ ಕ್ಷೇತ್ರದ 59 ಕ್ಷೇತ್ರಗಳ ಪೈಕಿ ಎನ್.ಡಿ.ಪಿ.ಪಿ 37 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಎನ್.ಪಿ.ಎಫ್ 1, ಐಎನ್.ಸಿ 2, ಎಸ್.ಪಿ.ಪಿ 4, ಇತರೆ 16 ಕ್ಷೇತ್ರಗಳಲ್ಲಿ ಸ್ಥಾನ ಪಡೆದುಕೊಂಡಿದೆ.
ಮೇಘಾಲಯದಲ್ಲಿ ಒಟ್ಟು 60 ಕ್ಷೇತ್ರಗಳ ಪೈಕಿ ಎನ್.ಪಿಪಿ 24 ಸ್ಥಾನಗಳಲ್ಲಿ ಮುನ್ನಡೆ ಕಂಡಿದ್ದು, ಯು.ಡಿ.ಪಿ 9, ಬಿಜೆಪಿ 7, ಕಾಂಗ್ರೆಸ್ 5, ಟಿಎಂಸಿ 4 ಇತರೆ 10 ಕ್ಷೇತ್ರಗಳಲ್ಲಿ ಸ್ಥಾನ ಪಡೆದುಕೊಂಡಿದೆ.
ತ್ರಿಪುರಾದ 60 ವಿಧಾನಸಭಾ ಕ್ಷೇತ್ರಗಳಿಗೆ ಫೆ.16ರಂದು ಚುನಾವಣೆ ನಡೆದಿದ್ದು, ಶೇ 89.98ರಷ್ಟು ಮತದಾನವಾಗಿತ್ತು. ನಾಗಾಲ್ಯಾಂಡ್ ಮತ್ತು ಮೇಘಾಲಯದ ತಲಾ 59 ಕ್ಷೇತ್ರಗಳಿಗೆ ಫೆ.27ರಂದು ನಡೆದ ಚುನಾವಣೆಯಲ್ಲಿ ಕ್ರಮವಾಗಿ 84.66 ಮತ್ತು 76.66ರಷ್ಟು ಮತದಾನವಾಗಿತ್ತು.