ಮಾ.3- 5- ಹಿರಿಯಡ್ಕದಲ್ಲಿ ಕೃಷಿ ಮೇಳ, ಸಾಂಸ್ಕೃತಿಕ ವೈಭವ
ಹಿರಿಯಡ್ಕ ಮಾ.1( ಉಡುಪಿ ಟೈಮ್ಸ್ ವರದಿ): ಹಿರಿಯಡ್ಕ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಇದೇ ಮಾ.3ರಿಂದ 5ರವರೆಗೆ ‘ಕೃಷಿ ಮೇಳ ಮತ್ತು ಸಾಂಸ್ಕೃತಿಕ ವೈಭವವನ್ನು ಆಯೋಜಿಸಲಾಗಿದೆ ಎಂದು ಬ್ರಹ್ಮಾವರ ಕೃಷಿ ಡಿಪ್ಲೊಮಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ ಕೆ. ವಿ. ಸುಧೀರ್ ಕಾಮತ್ ಅವರು ಹೇಳಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 3ರಂದು ಬೆಳಿಗ್ಗೆ 10ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಕೃಷಿ ಮೇಳವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಲಾಲಾಜಿ ಆರ್. ಮೆಂಡನ್, ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೃಷಿ ಮೇಳದಲ್ಲಿ 250ಕ್ಕೂ ಅಧಿಕ ಸ್ಟಾಲ್‌ಗಳನ್ನು ತೆರೆಯಲಾಗುತ್ತದೆ. ಕೃಷಿ ಯಂತ್ರೋಪಕರಣ ಮಾರಾಟ ಮತ್ತು ಪ್ರದರ್ಶನ ಇರಲಿದೆ ಎಂದು ತಿಳಿಸಿದರು.
ಈ ವೇಳೆ ಹಿರಿಯಡ್ಕ ಕೃಷಿ ಮೇಳ ಸಮಿತಿ ಗೌರವ ಅಧ್ಯಕ್ಷ ಪಳ್ಳಿ ನಟರಾಜ್ ಹೆಗ್ಡೆ ಮಾತನಾಡಿ, ಸಾಂಸ್ಕೃತಿ ವೈಭವ ಕೃಷಿ ಮೇಳದ ಪ್ರಮುಖ ಆಕರ್ಷಣೆಯಾಗಿದ್ದು, ಮಾ.3ರ ಸಂಜೆ 6ಕ್ಕೆ ಗರುಡ ಪಂಚೆಮಿ ತುಳು ನಾಟಕ, ಮಾ.4ರ ಸಂಜೆ 6ಕ್ಕೆ ಭುವನ ಭಾರತಿ ಯಕ್ಷಗಾನ, ಮಾ.5ರ ಸಂಜೆ 6ಕ್ಕೆ ತುಳುನಾಡ ಸಂಸ್ಕೃತಿ ವೈಭವ ಜರಗಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷ ಸುರೇಶ್ ನಾಯಕ್, ಬ್ರಹ್ಮಾವರ ಕೆವಿಕೆ ಮುಖ್ಯಸ್ಥ ಡಾ ಬಿ. ಧನಂಜಯ್, ಕೃಷಿ ಸಮಿತಿ ಕಾರ್ಯದರ್ಶಿ ಎಚ್. ಶ್ರೀನಿವಾಸ್ ರಾವ್ ಇದ್ದರು.