ವಾರಾಹಿ ಯೋಜನೆಯ ದಿಕ್ಕು-ದಿಶೆ ಗುತ್ತಿಗೆದಾರರೇ ನಿರ್ವಹಿಸುವ ದುಸ್ಥಿತಿ ಬಂದಿದೆ-ಕೆ.ಪ್ರತಾಪ ಚಂದ್ರ ಶೆಟ್ಟಿ
ಕುಂದಾಪುರ ಮಾ.1 : ಸುದೀರ್ಘ ಕಾಲದಿಂದ ಅನುಷ್ಠಾನಗೊಳ್ಳುತ್ತಿರುವ ವಾರಾಹಿ ಯೋಜನೆಯ ನೀರು ಯಾವ ದಿಕ್ಕಿನಲ್ಲಿ ಹೇಗೆ ಹೋಗಬೇಕೆನ್ನುವ ತೀರ್ಮಾನವನ್ನು ಗುತ್ತಿಗೆದಾರರೇ ನಿರ್ವಹಿಸುವ ದುಸ್ಥಿತಿ ಬಂದಿರುವುದು ವ್ಯವಸ್ಥೆಯ ದುರಂತವಾಗಿದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್‍ನ ಮಾಜಿ ಸಭಾಪತಿ ಕೆ.ಪ್ರತಾಪ ಚಂದ್ರ ಶೆಟ್ಟಿ ಅವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಕುಂದಾಪುರದ ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ನಡೆದ ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರೈತರ ಮಹತ್ವಾಕಾಂಕ್ಷೆಯ ಯೋಜನೆಯೊಂದು ಎತ್ತ ಸಾಗುತ್ತಿದೆ ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ. 15,000 ಹೇಕ್ಟೆರ್ ಭೂ ಪ್ರದೇಶಗಳಿಗೆ ನೀರೂಣಿಸುವ ಮೂರೂವರೆ ದಶಕಗಳ ಈ ಯೋಜನೆಯನ್ನು ಎಲ್ಲಿ ದಡ ಮುಟ್ಟಿಸಬೇಕು ಎನ್ನುವುದೆ ಅರ್ಥವಾಗುತ್ತಿಲ್ಲ. ಪ್ರಭಾವಿಗಳೆ ಇರುವ ಹಾಲಾಡಿ ಹೊಳೆಗೆ ಯೋಜನೆಯ ನೀರು ಸೇರುತ್ತಿದೆ. ನೀರು ಬೇಕಾದ ಕಡೆಗೆ ಹರಿದು ಹೋಗುತ್ತಿಲ್ಲ. ವಾರಾಹಿ ಯೋಜನೆಯ ಮೂಲ ಉದ್ದೇಶಗಳು ಇಂದು ಮರೆಯಾಗುತ್ತಿದೆ ಎಂದು ಹೇಳಿದರು.
ಈ ವೇಳೆ ವಿಧಾನ ಪರಿಷತ್ ಅಧ್ಯಕ್ಷನಾಗಿದ್ದಾಗ ಅರ್ಜಿ ವಿವೇವಾರಿಗಾಗಿ ಕಳುಹಿಸಿದ್ದ ಸಮಿತಿಯ ಮೇಲೆ ಇದ್ದ ಭರವಸೆಗಳು ಹುಸಿಯಾಗಿವೆ ಎಂದ ಅವರು, ಕಳೆದ 4-5 ವರ್ಷಗಳಿಂದ ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಯೋಜನೆಯ ಕುರಿತು ಮಾತನಾಡುತ್ತಿಲ್ಲ. ಕೇವಲ ರೈತ ಸಂಘ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡುತ್ತಿದೆ. ಗುತ್ತಿಗೆದಾರರ ಆಶ್ರಯದಲ್ಲಿ ಯಾರೆಲ್ಲ ಇದ್ದಾರೆ ಎನ್ನುವುದನ್ನು ಪ್ರಶ್ನೆ ಮಾಡಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಂದಾಜು 100 ಎಕ್ರೆ ಬೆಲೆ ಬಾಳುವ ಆಸ್ತಿಯನ್ನು ಹೊಂದಿದ್ದು, ಇದು ಜಿಲ್ಲೆಯ ರೈತ ಬಾಂಧವರ ಆಸ್ತಿಯಾಗಿದೆ. ಇದು ಅನ್ಯರ ಪರಭಾರೆಯಾಗದಂತೆ ಜಿಲ್ಲೆಯ ರೈತರು ಹಕ್ಕೊತ್ತಾಯ ಮಾಡಿ ಕಾಪಾಡಿಕೊಳ್ಳಲಿದ್ದಾರೆ. ಇಲ್ಲಿನ ಅಕ್ರಮಗಳ ಬಗ್ಗೆ ಕೇವಲ ರೈತ ಸಂಘ ಮಾತ್ರ ಮಾತನಾಡುತ್ತಿದೆ ಎಂದವರು ಬೇಸರ ವ್ಯಕ್ತಪಡಿಸಿದರು. ಹಾಗೂ ‘ಮನೆಯ ಕಲ್ಲುಗಳನ್ನೆ ಕಿತ್ತು ಮಾರಾಟ ಮಾಡುವ’ ಭ್ರಷ್ಟಾಚಾರದ ಕೂಟದಿಂದ ಸ್ವಯಂಪ್ರೇರಿತರಾಗಿ ಹೊರಕ್ಕೆ ಬರುವ ತೀರ್ಮಾನಗಳನ್ನು ಕಾರ್ಖಾನೆಯ ನಿರ್ದೇಶಕರು ಮಾಡಬೇಕು. ಆಡಳಿತ ಮಂಡಳಿಯಲ್ಲಿ ಎಲ್ಲ ರಾಜಕೀಯ ಪಕ್ಷದವರಿದ್ದು, ಇಲ್ಲಿ ರಾಜಕೀಯ ಮಾಡುವ ಉದ್ದೇಶ ಇಲ್ಲ. ಕಾರ್ಖಾನೆಯ ಒಂದೊಂದು ಪೈಸೆಯೂ ವಸೂಲಾತಿಯಾಗಬೇಕು ಎನ್ನುವುದು ಉದ್ದೇಶವಾಗಿದೆ ಎಂದರು.
ಹಾಗೂ ಬ್ರಹ್ಮಾವರದ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಿಂದ ಕಾರ್ಖಾನೆಗೆ ಅಂದಾಜು 13 ಕೋಟಿಗಳಿಗಿಂತಲೂ ಹೆಚ್ಚು ನಷ್ಟವಾಗಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳಿಗೆ ಸೂಕ್ತ ತನಿಖೆಗಾಗಿ ಅರ್ಜಿ ಸಲ್ಲಿಸಿದ್ದರೂ ಸ್ಪಂದನೆಯಿಲ್ಲದ್ದರಿಂದ ಉಡುಪಿ ಜಿಲ್ಲಾ ರೈತ ಸಂಘದ ಮೂಲಕ ರಾಜ್ಯದ ಉಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು. ಅಗತ್ಯ ಬಿದ್ದಲ್ಲಿ ಸರ್ವೋಚ್ಛ ನ್ಯಾಯಾಲಯದವರೆಗೂ ಹೋಗುವ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ರೈತ ಸಂಘದ ವಕ್ತಾರ ಕೆ.ವಿಕಾಸ್ ಹೆಗ್ಡೆ ಅವರು ಮಾತನಾಡಿ, ಅಕ್ರಮ- ಸಕ್ರಮಕ್ಕಾಗಿ 57ರಡಿಯಲ್ಲಿ ಅರ್ಜಿ ಸ್ವೀಕರಿಸಿ, ಬಡವರು 10-15 ಸಾವಿರ ವ್ಯಯ ಮಾಡಿದ ಬಳಿಕ ಈ ಜಾಗ ಡೀಮ್ಡ್ ಅರಣ್ಯ ಅಥವಾ ಕುಮ್ಕಿ ಎನ್ನುವ ಹಿಂಬರಹ ನೀಡಿ ಅರ್ಜಿಯನ್ನು ತಿರಸ್ಕರಿಸಲಾಗುತ್ತಿದೆ. ಅರ್ಜಿ ಸ್ವೀಕರಿಸುವ ಹಂತದಲ್ಲಿಯೇ ಅರ್ಜಿದಾರರ ಜಾಗದ ಬಗ್ಗೆ ಸ್ವಷ್ಟ ಮಾಹಿತಿಯನ್ನು ಪಡೆದುಕೊಳ್ಳುವುದರಿಂದ ಬಡವರಿಗೆ ಖರ್ಚಾಗುವ ಅನಗತ್ಯ ವೆಚ್ಚದ ಕಡಿವಾಣಕ್ಕೆ ಸಹಾಯವಾಗುತ್ತದೆ ಎಂದರು.
ಇನ್ನು ಸಭೆಯಲ್ಲಿ ಸತೀಶ್ ಕಿಣಿ ಬೆಳ್ವೆ, ಸೀತಾರಾಮ ಗಾಣಿಗ, ಸದಾನಂದ ಶೆಟ್ಟಿ ಕೆದೂರು, ಕೋಣಿ ಕೃಷ್ಣದೇವ ಕಾರಂತ್, ವಸಂತ ಹೆಗ್ಡೆ ಬೈಂದೂರು, ಕೃಷ್ಣ ಪೂಜಾರಿ ಅಮಾಸೆಬೈಲು ಮಾತನಾಡಿ ರೈತರ ವಿವಿಧ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದರು.
ಪ್ರಮುಖರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಡಾ.ಅತುಲ್ ಕುಮಾರ ಶೆಟ್ಟಿ ಚಿತ್ತೂರು, ಮಲ್ಯಾಡಿ ಶಿವರಾಮ್ ಶೆಟ್ಟಿ, ನ್ಯಾಯವಾದಿ ಕೃಷ್ಣರಾಜ್ ಶೆಟ್ಟಿ ಚೋರಾಡಿ, ಶರತ್‍ಕುಮಾರ ಶೆಟ್ಟಿ ಬಾಳಿಕೆರೆ, ರೋಹಿತ್‍ಕುಮಾರ ಶೆಟ್ಟಿ ತೊಂಬಟ್ಟು, ಉದಯಕುಮಾರ ಶೆಟ್ಟಿ ವಂಡ್ಸೆ, ನಾರಾಯಣ ನಾಯ್ಕ್ ನೇರಳಕಟ್ಟೆ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಚಂದ್ರಶೇಖರ ಶೆಟ್ಟಿ ಮರತ್ತೂರು, ಶರತ್‍ಕುಮಾರ ಶೆಟ್ಟಿ ಕಾವ್ರಾಡಿ ಉಪಸ್ಥಿತರಿದ್ದರು.