ಮಣಿಪಾಲ: ಕೆಎಂಸಿಯಿಂದ “ಯುವೈಟಿಸ್ ಪೇ ಚರ್ಚಾ” ಕಾರ್ಯಕ್ರಮ
ಮಣಿಪಾಲ ಮಾ.1 (ಉಡುಪಿ ಟೈಮ್ಸ್ ವರದಿ) : ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗ, ಯುವೈಟಿಸ್ ಸೊಸೈಟಿ ಆಫ್ ಇಂಡಿಯಾ, ಕರ್ನಾಟಕ ಆಫ್ತಾಲ್ಮಿಕ್ ಸೊಸೈಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಆಫ್ತಾಲ್ಮಿಕ್ ಸೊಸೈಟಿ (UDOS) ಸಹಯೋಗದೊಂದಿಗೆ ಇತ್ತೀಚೆಗೆ “ಯುವೈಟಿಸ್ ಪೇ ಚರ್ಚಾ” ಎನ್ನುವ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ನಡೆಯಿತು.
ಕೆ.ಎಂ.ಸಿ ಮಣಿಪಾಲದ ಇಂಟರಾಕ್ಟ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ಕೆಎಂಸಿ ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರೋಗಿಗಳ ಆರೈಕೆಯನ್ನು ಸುಧಾರಿಸುವಲ್ಲಿ ಉಪವಿಭಾಗಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು ಮತ್ತು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯುವೈಟಿಸ್ ನಿರ್ವಹಣೆಯ ಪ್ರಗತಿಯನ್ನು ಶ್ಲಾಘಿಸಿದರು.
ಯುವೈಟಿಸ್ ಸೊಸೈಟಿ ಆಫ್ ಇಂಡಿಯಾದ ಕಾರ್ಯದರ್ಶಿ ಡಾ.ಸುದರ್ಶನ್ ಎಸ್, ಕರ್ನಾಟಕ ಆಫ್ತಾಲ್ಮಿಕ್ ಸೊಸೈಟಿ ಅಧ್ಯಕ್ಷ ಡಾ.ಕೃಷ್ಣ ಪ್ರಸಾದ್ ಕೂಡ್ಲು, ಉಡುಪಿ ಜಿಲ್ಲಾ ಆಫ್ತಾಲ್ಮಿಕ್ ಸೊಸೈಟಿ ಅಧ್ಯಕ್ಷ ಡಾ.ಶ್ರೀನಾಥ್ ಕಾಮತ್ ಮತ್ತು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ.ಶಿರನ್ ಶೆಟ್ಟಿ ಗೌರವ ಅಥಿತಿಗಳಾಗಿದ್ದರು. ನೇತ್ರವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಹಾಗೂ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದ ಸಂಘಟನಾ ಅಧ್ಯಕ್ಷ ಡಾ. ಯೋಗೀಶ್ ಎಸ್ ಕಾಮತ್. ಸಂಘಟನಾ ಕಾರ್ಯದರ್ಶಿ ಡಾ.ಸೌಮ್ಯ ಎಸ್ ಉಪಸ್ಥಿತರಿದ್ದರು.
ಕರ್ನಾಟಕದ ನೇತ್ರ ತಜ್ಞರುಗಳು ಮತ್ತು ಕರ್ನಾಟಕದ ವಿವಿಧ ಕಾಲೇಜುಗಳ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು. ಓಇಯು ಅಲುಮ್ನಿ ರೋಲಿಂಗ್ ಟ್ರೋಫಿಯನ್ನು ಚರ್ಚಾ ಸ್ಪರ್ಧಾ ವಿಜೇತೆ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯ ಡಾ. ಕೃತಿಕಾ ರೆಡ್ಡಿ ಅವರಿಗೆ ಡಾ.ಲಾವಣ್ಯ ರಾವ್ ಹಸ್ತಾಂತರಿಸಿದರು. 13 ತಂಡಗಳು ಭಾಗವಹಿಸಿದ್ದ ಅತ್ಯಾಕರ್ಷಕ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಂಗಳೂರಿನ ಎಜೆ ಆಸ್ಪತ್ರೆಯ ಡಾ.ಶ್ರೀಯಾ ಮತ್ತು ಡಾ.ಹರ್ಷಿತ್ ವಿಜೇತರಾದರು.