ಎ.30 – ಮೇ11- ಕೊಲ್ಲೂರು ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ

ಉಡುಪಿ ಮಾ.1 (ಉಡುಪಿ ಟೈಮ್ಸ್ ವರದಿ): ಬೈಂದೂರಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಬರೋಬ್ಬರಿ 21 ವರ್ಷಗಳ ಬಳಿಕ ಮೊದಲ ಬಾರಿಗೆ ಎ.30 ರಿಂದ ಮೇ.11 ರ ವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವವು ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಹಾಗೂಶ್ರೀ ಮೂಕಾಂಬಿಕಾ ದೇಸ್ಥಾನದ ಕಾರ್ಯನಿರ್ವಹಣಾಧಿಕಾರಿ ವೀಣಾ ಬಿ.ಎನ್ ಅವರು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ಕೆ ಅಂದಾಜು 5 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದ್ದು, ದೇವಸ್ಥಾನದಿಂದ ರೂ. 2 ಕೋಟಿಯನ್ನು ಬಳಸಿಕೊಳ್ಳಲು ಮತ್ತು ಉಳಿದ 3 ಕೋಟಿ ರೂಪಾಯಿಗಳನ್ನು ಭಕ್ತರಿಂದ ಸಂಗ್ರಹಿಸಿ ಖರ್ಚು ಮಾಡಲು ಸರ್ಕಾರ ಅನುಮತಿ ನೀಡಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಸಹೃದಯ ಭಕ್ತರ ಸಹಕಾರವನ್ನು ಕೋರಿದ್ದಾರೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು ಈ ಹಿಂದೆ 1972 ನೇ ಇಸವಿಯಲ್ಲಿ ನಡೆದಿತ್ತು. ಆ ಬಳಿಕ 30 ವರ್ಷದ ನಂತರ 2002 ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿತ್ತು. ಅದು ನಡೆದು 21 ವರ್ಷಗಳ ನಂತರ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸಲು ಸಮಯ ಒದಗಿ ಬಂದಿದೆ. ಪ್ರತಿ 12 ವರ್ಷಗಳಿಗೊಮ್ಮೆ ಅಪ್ಪಬಂಧ ನಡೆಸಬೇಕೆಂದು ಶಾಸ್ತ್ರ ಹೇಳುತ್ತದೆ. ಅನಿವಾರ್ಯ ಕಾರಣಗಳಿಂದ ಈ ದೇವಸ್ಥಾನದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಅಷ್ಟಬಂಧ ನಡೆಸಲು ಸಾಧ್ಯವಾಗಿರುವುದಿಲ್ಲ. ಈ ಒಂದು ದೇವತಾ ಕಾರ್ಯ ನಡೆಸಲು ಈಗ ಕಾಲ ಕೂಡಿ ಬಂದಿದೆ. ಕ್ಷೇತ್ರದ ತಂತ್ರಿಗಳು, ಅರ್ಚಕರು, ಉಪಾಧಿವಂತ ಕ್ಷೇತ್ರ ಪುರೋಹಿತರು, ಇಲಾಖಾ ಆಗಮ ಪಂಡಿತರು ಹಾಗೂ ಊರ ಪರ ಊರ ಭಕ್ತರ ಸಲಹೆ ಸೂಚನೆಯನ್ನು ಪಡೆದು ಜಿಲ್ಲಾಧಿಕಾರಿಯವರ ಧಾರ್ಮಿಕ ದತ್ತಿ ಆಯುಕ್ತರ ಹಾಗೂ ಸರ್ಕಾರದಿಂದ ಅನುಮತಿಯನ್ನು ಪಡೆದು ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸುವ ಬಗ್ಗೆ ತೀರ್ಮಾನಿಸಲಾಗಿದೆ.

50 ವರ್ಷಗಳ ನಂತರ ದಾನಿಗಳಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಹಾಗೂ ಅವರ ಕುಟುಂಬಸ್ಥರು ನಿರ್ಮಿಸಿ ದೇವಸ್ಥಾನಕ್ಕೆ ನೀಡಿರುವ ಶ್ರೀ ವೀರಭದ್ರ ದೇವರ ನೂತನ ಶಿಲಾಮಯ ದೇವಸ್ಥಾನವು 2022 ರ ಮೇ.25 ಮತ್ತು ಮೇ.26 ರಂದು ಧಾರ್ಮಿಕ ಕಾರ್ಯಕ್ರಮಗೊಳೊಂದಿಗೆ ಲೋಕಾರ್ಪಣೆಗೊಂಡಿರುತ್ತದೆ. ಅಲ್ಲದೇ ಖ್ಯಾತ ಉದ್ಯಮಿ ಮುರ್ಡೇಶ್ವರದ ಆರ್.ಎನ್.ಶೆಟ್ಟಿ ಇವರ ಪುತ್ರ ಉದ್ಯಮಿ ಸುನಿಲ್ ಆರ್.ಶೆಟ್ಟಿ ಇವರು ಭಕ್ತಿ ಪೂರ್ವಕವಾಗಿ ನೀಡಿರುವ ನೂತನ ಬ್ರಹ್ಮರಥವು ಫೆ.15 ರಂದು ಪುರಪ್ರವೇಶಗೊಂಡು ಫೆ.16 ರಂದು ದೇವಿಗೆ ಸಮರ್ಪಿಸುವ ಮೂಲಕ ಲೋಕಾರ್ಪಣೆಗೊಳಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!