ಶೇ.17ರಷ್ಟು ವೇತನ ಹೆಚ್ಚಳ ಮಾಡಿ ಆದೇಶ: ಸರಕಾರಿ ನೌಕರರ ಮುಷ್ಕರ ವಾಪಸ್- ತಕ್ಷಣ ಕರ್ತವ್ಯಕ್ಕೆ ಹಾಜರಾಗಲು ಕರೆ
ಬೆಂಗಳೂರು, ಮಾ.1: ಶೇ.17ರಷ್ಟು ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳವನ್ನು 2023ರ ಎಪ್ರಿಲ್ 1ರಿಂದ ಅನ್ವಯ ಆಗುವಂತೆ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ರಾಜ್ಯ ಸರಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರವನ್ನು ಹಿಂಪಡೆದಿದ್ದಾರೆ.
ಈ ಕುರಿತು ಪದಾಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು, ‘ನಿನ್ನೆ (ಮಂಗಳವಾರ) ಮುಖ್ಯಮಂತ್ರಿ ಸೇರಿ 9 ಸಚಿವರ ಜೊತೆ ಸಭೆ ನಡೆಸಿದ್ದೆವು. ಇನ್ನು ಸರಕಾರ 2 ಆದೇಶ ಹೊರಡಿಸಿದೆ. ಅದಕ್ಕೆ ನಾವು ಒಪ್ಪಿದ್ದೇವೆ. ಈ ಹಿನ್ನೆಲೆಯಲ್ಲಿ ನಮ್ಮ ಪದಾಧಿಕಾರಿಗಳ ಸಭೆಯಲ್ಲಿ ಮುಷ್ಕರ ವಾಪಸ್ ಪಡೆಯುವ ಬಗ್ಗೆ ಒಮ್ಮತದ ತೀರ್ಮಾನ ಕೈಗೊಂಡಿದ್ದೇವೆ’ ಎಂದು ತಿಳಿಸಿದರು. ಹಾಗೂ ರಾಜ್ಯಾದ್ಯಂತ ನೌಕರರು ಮುಷ್ಕರ ಕೈ ಬಿಟ್ಟು ತಕ್ಷಣ ಸರಕಾರಿ ಕಚೇರಿಗಳಿಗೆ ಹಾಜರಾಗುವಂತೆ ಇದೇ ವೇಳೆ ಸರಕಾರಿ ನೌಕರರ ಸಂಘದ ಅಧ್ಯಕ್ಷರು ಮನವಿ ಮಾಡಿಕೊಂಡರು.