ಉಡುಪಿ: ತಡರಾತ್ರಿ ಮೆಹೆಂದಿಯಲ್ಲಿ ಡಿಜೆ-ಪೊಲೀಸ್ ದಾಳಿ
ಉಡುಪಿ ಫೆ.27 (ಉಡುಪಿ ಟೈಮ್ಸ್ ವರದಿ): ಕುಂಜಿಬೆಟ್ಟು ಪರಿಸರದಲ್ಲಿ ನಡೆಯುತ್ತಿದ್ದ ಮೆಹೆಂದಿ ಕಾರ್ಯಕ್ರಮದಲ್ಲಿ ಅವಧಿಗೂ ಮೀರಿ ಯಾವುದೇ ಪರವಾನಿಗೆ ಇಲ್ಲದೆ ಡಿಜೆ ಸೌಂಡ್ ಹಾಕಿದ್ದ ಮನೆಗೆ ದಾಳಿ ಮಾಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಂಜಿಬೆಟ್ಟು ಪರಿಸರದಲ್ಲಿ ಫೆ.26 ರ ತಡರಾತ್ರಿ 1.30 ರ ಸುಮಾರಿಗೆ ಮೆಹೆಂದಿ ಕಾರ್ಯಕ್ರಮದಲ್ಲಿ ಅತೀ ಕರ್ಕಶವಾದ ಡಿ.ಜೆ ಸೌಂಡ್ ಹಾಕಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂಬ ಸಾರ್ವಜನಿಕ ದೂರಿನ ಮೇರೆಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ಉಡುಪಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಉಡುಪಿಯ 76-ಬಡಗುಬೆಟ್ಟು ಗ್ರಾಮದ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನದ ಬಳಿಯ ಶರತ್ ಎಂಬವರ ಮನೆಯಯಲ್ಲಿ ನಡೆಯುತ್ತಿದ್ದ ಮೆಹೆಂದಿ ಕಾರ್ಯಕ್ರಮದಲ್ಲಿ ಯಾವುದೇ ಪರವಾನಿಗೆ ಅಥವಾ ಪೂರ್ವಾನುಮತಿ ಇಲ್ಲದೆ ಅತೀ ಕರ್ಕಶವಾದ ಡಿ.ಜೆ ಸೌಂಡ್ಸ್ ಹಾಕಿಕೊಂಡು ರಾತ್ರಿ 02:00 ಗಂಟೆ ತನಕ ನೃತ್ಯ ಮಾಡುತ್ತಿದ್ದೂದು ಕಂಡು ಬಂದಿದೆ. ಬಳಿಕ ಪರಿಶೀಲನೆ ನಡೆಸಿದ ಪೊಲೀಸರು 4 ಸೌಂಡ್ ಬಾಕ್ಸ್, 1 Pearl 1024B Light Controller, 1 DJ Controller, 1 Sound Controller ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.