ಪ್ರಧಾನಿ ಮೋದಿ, ಅಮಿತ್ ಶಾ ಬಿಜೆಪಿಯ ಚುನಾವಣಾ ಏಜೆಂಟರ್‍ಗಳು: ಸಿದ್ದರಾಮಯ್ಯ ಟೀಕೆ
ಬೆಂಗಳೂರು ಫೆ.27 : ”ಪ್ರಧಾನಿ ನರೇಂದ್ರಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ಬಿಜೆಪಿಯ ಚುನಾವಣಾ ಏಜೆಂಟರಾಗಿ ದುಡಿಯುತ್ತಿದ್ದಾರೆ” ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಈ ವಿಚಾರವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿ ಪ್ರತಿಕ್ರಿಯೆ ನೀಡಿರುವ ಅವರು, ”ಪ್ರಧಾನಿ ನರೇಂದ್ರಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ದೇಶದ ಕೆಲಸ ಮಾಡುವುದನ್ನು ಬಿಟ್ಟು ಕೇವಲ ಬಿಜೆಪಿಯ ಚುನಾವಣಾ ಏಜೆಂಟರಾಗಿ ದುಡಿಯುತ್ತಿದ್ದಾರೆ” ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಹಾಗೂ “ನಮ್ಮ ರಾಜ್ಯದ ಜನರಿಂದ ದೋಚಿಕೊಂಡ ಸಂಪತ್ತನ್ನು ಪ್ರವಾಹ, ಬರ, ಕೋವಿಡ್ ನಂತಹ ಮಾರಕ ಕಾಯಿಲೆಗಳಿಗೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ, ಜನರ ಕಲ್ಯಾಣಕ್ಕೆ ಖರ್ಚು ಮಾಡುವ ಬದಲು ಚುನಾವಣಾ ಪ್ರಚಾರಗಳಿಗೆ ಖರ್ಚು ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಮೋದಿಯವರು ಎಲ್ಲ ಕಡೆ ಹೇಳುವ ಹಾಗೆ ನಮ್ಮ ರಾಜ್ಯದ ವಿಚಾರದಲ್ಲೂ ಸುಳ್ಳು ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ಬುದ್ಧಿವಂತರೆನ್ನಿಸಿಕೊಂಡ ಜನರಿದ್ದಾರೆ, ಅವರು ದಾಖಲೆಗಳನ್ನು ಆಧರಿಸಿ ಮಾತನಾಡುತ್ತಾರೆ ಎಂಬುದನ್ನೂ ಮರೆತು ಮಾತನಾಡುತ್ತಾರೆ. ಹಾಗಿದ್ದರೆ ವಾಸ್ತವವೇನು?” ಎಂದು ಪ್ರಶ್ನೆ ಮಾಡಿದ್ದಾರೆ.
‘ಎಂದೂ ಉಸಿರೇ ಬಿಡದಿದ್ದ ಮೋದಿಯವರು ಇತ್ತೀಚೆಗೆ ನವದೆಹಲಿಯ ಕರ್ನಾಟಕ ಭವನದ ಅಮೃತ ಮಹೋತ್ಸಹ ಹಾಗೂ ಬಾರಿಸು ಕನ್ನಡ ಡಿಂಡಿಮವ ಎಂಬ ಕಾರ್ಯಕ್ರಮದಲ್ಲಿ ತಾವು ಕರ್ನಾಟಕದ ರೈಲ್ವೆಗೆ, ಹೆದ್ದಾರಿ ಯೋಜನೆಗಳಿಗೆ ಬಹಳ ಅನುದಾನಗಳನ್ನು ಕೊಟ್ಟಿದ್ದೇವೆ ಹಾಗೂ ಅನುದಾನಗಳನ್ನು ಹೆಚ್ಚಿಸಿದ್ದೇವೆ, ಮನಮೋಹನಸಿಂಗ್ ನೇತೃತ್ವದ ಯುಪಿಎ ಸರ್ಕಾರಕ್ಕಿಂತ ಎಷ್ಟೋ ಪಾಲು ಹೆಚ್ಚು ಕೊಟ್ಟಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ’ ಎಂದು ಹೇಳಿದರು.
`ನಾನು ಮೋದಿಯವರು ರಾಜ್ಯಕ್ಕೆ ಬಂದಾಗಲೆಲ್ಲ ಕರ್ನಾಟಕದ ಜನರಿಂದ ಲೂಟಿಯ ರೀತಿಯಲ್ಲಿ ಸಂಗ್ರಹಿಸುತ್ತಿರುವ ತೆರಿಗೆ, ಮೇಲ್ತೆರಿಗೆಗಳಲ್ಲಿ ರಾಜ್ಯಕ್ಕೆ ನ್ಯಾಯವಾದ ಪಾಲು ಕೊಡದೆ ಜನರಿಗೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಆಕ್ಷೇಪಿಸುತ್ತಲೆ ಇದ್ದೇನೆ. ಮೊನ್ನೆಯ ಬಜೆಟ್ ಭಾಷಣದಲ್ಲಿ ಮೋದಿ ಸರ್ಕಾರವು ನಮ್ಮ ರಾಜ್ಯದಿಂದ 4.75 ಲಕ್ಷ ಕೋಟಿಗಳಷ್ಟು ಸಂಪತ್ತನ್ನು ದೋಚಿಕೊಂಡು ಕೇವಲ 37 ಸಾವಿರ ಕೋಟಿ ತೆರಿಗೆ ಪಾಲು ಕೊಡುತ್ತಿದೆ ಇದು ಅನ್ಯಾಯವೆಂದು ಪ್ರತಿಭಟಿಸಿದ್ದೆ ಹಾಗೂ ಈ ಕುರಿತು ದಾಖಲೆಗಳನ್ನು ಒದಗಿಸಿದ್ದೆ’ ಎಂದು ತಿಳಿಸಿದ್ದಾರೆ.