ಕರ್ನಾಟಕ ಪ್ರವಾಸದಲ್ಲಿ ಪ್ರಧಾನಿ ಮೋದಿ- ಕಾಂಗ್ರೆಸ್’ನಿಂದ #ThankYouModi ಅಭಿಯಾನ
ಬೆಂಗಳೂರು ಫೆ.27 : ಕರ್ನಾಟಕಕ್ಕೆ ನಯಾಪೈಸೆ ನೆರವು ನೀಡದೆ ಈಗ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಟೂರಿಸ್ಟ್ ಆಗಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಟೀಕಿಸಿದೆ.
ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟನೆ ಸೇರಿದಂತೆ ಗಡಿನಾಡಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ರಾಜ್ಯಕ್ಕೆ ಆಗಮಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಟ್ವಿಟರ್ ನಲ್ಲಿ #ThankYouModi ಹ್ಯಾಶ್ ಟ್ಯಾಗ್ ಬಳಸಿ ಅಭಿಯಾನ ಆರಂಭಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, ”ಕರ್ನಾಟಕವು ಪ್ರತಿ ವರ್ಷ ನಿರಂತರ ಪ್ರವಾಹ ಎದುರಿಸಿದಾಗ, ಜನರ ಬದುಕು ಮುಳುಗಿದಾಗ, ಅಪಾರ ಆಸ್ತಿಪಾಸ್ತಿ ಹಾನಿಯಾದಾಗ ಕರ್ನಾಟಕದತ್ತ ತಿರುಗಿಯೂ ನೋಡದ ನರೇಂದ್ರ ಮೋದಿ ಅವರೇ, ತಾವು ಕರ್ನಾಟಕಕ್ಕೆ ನಯಾಪೈಸೆ ನೆರವು ನೀಡದೆ ಈಗ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಟೂರಿಸ್ಟ್ ಆಗಿದ್ದೀರಿ.ತಮ್ಮ ಈ ದ್ರೋಹಕ್ಕೆ ಧನ್ಯವಾದಗಳು” #ThankYouModi ಎಂದು ಟೀಕಿಸಿದೆ.
”40% ಕಮಿಷನ್ ದೂರುಗಳಿಗೆ ಪ್ರಧಾನಿಯಿಂದ ಕನಿಷ್ಠ ಸ್ಪಂದನೆಯೂ ಇಲ್ಲ, ಕ್ರಮವೂ ಇಲ್ಲ. ಹಿಂದೆ ಪ್ರಧಾನಿ ಭೇಟಿಗಾಗಿ ಹಾಕಿದ್ದ ರಸ್ತೆ ಕಿತ್ತು ಬಂದಿದ್ದಕ್ಕೆ ವರದಿ ಕೇಳಿದ್ದರು, ಆ ಲೂಟಿಯ ಬಗ್ಗೆ ತನಿಖೆಯೇ ಇಲ್ಲ , ಸಂತೋಷ್ ಪಾಟೀಲ್ ಪತ್ರಕ್ಕೆ ಪ್ರಧಾನಿಯ ಉತ್ತರವಿಲ್ಲ. ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ1 ಮಾಡಿದ್ದಕ್ಕೆ #ThankYouModi !!”
”ಉಡುವ ಬಟ್ಟೆಯಿಂದ ತಿನ್ನುವ ಅನ್ನದವರೆಗೂ GST ತೆರಿಗೆ ಹಾಕಿ ಜನಸಾಮಾನ್ಯರ ಬದುಕನ್ನು ದುರ್ಭರಗೊಳಿಸಿದ ನರೇಂದ್ರ ಮೋದಿ ಅವರಿಗೆ ಅನಂತಾನಂತ ಧನ್ಯವಾದಗಳು! ಇಂತಹ ಕಠೋರ, ಅಮಾನವೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಮೋದಿಯಿಂದ ಮಾತ್ರ ಸಾಧ್ಯ. ದರೋಡೆಗೆ GST ಎಂದು ಹೆಸರಿಟ್ಟು ಕಾನೂನುಬದ್ಧಗೊಳಿಸಿದ್ದಕ್ಕೆ#ThankYouModi !”
”ಪಿಎಸ್‌ಐನಿಂದ ಹಿಡಿದು ಪೌರ ಕಾರ್ಮಿಕರ ನೇಮಕಾತಿಯವರೆಗೂ ಪ್ರತಿ ಹುದ್ದೆಗಳನ್ನೂ ರೇಟ್ ಕಾರ್ಡ್ ಹಾಕಿ ಮಾರಾಟ ಮಾಡುತ್ತಿರುವ ಬಿಜೆಪಿ ಸರ್ಕಾರದ ಸಾಧನೆ ಅಮೋಘವಾದುದು! ಅರ್ಹತೆಯ ಆಧಾರದಲ್ಲಿ ಸಿಗುತ್ತಿದ್ದ ಉದ್ಯೋಗಗಳನ್ನ ಸುಲಭವಾಗಿ ಹಣ ಕೊಟ್ಟು ಕೊಳ್ಳುವಂತ ವ್ಯವಸ್ಥೆ ನಿರ್ಮಾಣವಾಗಿದ್ದರಲ್ಲಿ ಮೋದಿಯವರ ಪಾತ್ರ ದೊಡ್ಡದಿದೆ!” #ThankYouModi
”ಕರ್ನಾಟಕದಲ್ಲಿ ಭ್ರಷ್ಟಾಚಾರವು ಡಬಲ್ ವೇಗದಲ್ಲಿ ಮುನ್ನುಗ್ಗುತ್ತಿದೆ. ನರೇಂದ್ರ ಮೋದಿ ಅವರೇ, ಭ್ರಷ್ಟಾಚಾರಕ್ಕೆ ಯಾವುದೇ ತಡೆಯಿಲ್ಲದೆ, ಯಾವುದೇ ಅಂಜಿಕೆ, ಅಳುಕಿಲ್ಲದೆ #40PercentSarkara ನಡೆಸಿದ್ದಕ್ಕೆ ತಮಗೆ ಧನ್ಯವಾದಗಳು. “ಮೋದಿ ಹೈ ತೊ ಮುಮ್ಕಿನ್ ಹೈ” ಎನ್ನುವಂತೆ ಇದು ಸಾಧ್ಯವಾಗಿದ್ದು ನಿಮ್ಮಿಂದಲೇ ಅಲ್ಲವೇ!” #ThankYouModi
”ಮೋದಿ ಸರ್ವಶಕ್ತ, ಸರ್ವಾಂತರ್ಯಾಮಿ ಎನ್ನುವ ಬಿಜೆಪಿ ಸರ್ವಶಕ್ತ ಮೋದಿಗೆ ಬೆಲೆ ಏರಿಕೆ ನಿಯಂತ್ರಿಸಲು ಸಾಧ್ಯವಾಗಿಲ್ಲವೇಕೆ ಎಂದರೆ ಪಾಕಿಸ್ತಾನದ ಕಡೆ ಕೈ ತೋರಿಸುತ್ತಾರೆ! ಗ್ಯಾಸ್ ಬೆಲೆಯನ್ನು ₹1000 ದಾಟಿಸಿ, ಪೆಟ್ರೋಲ್ ಬೆಲೆಯನ್ನು ₹100 ದಾಟಿಸಿ, ಜನರ ಬದುಕಿನ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿರುವ ಮೋದಿಗೆ ಧನ್ಯವಾದಗಳು! #ThankYouModi”
”ದೇಶದಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಪ್ರಮುಖವಾದುದು. ಕರ್ನಾಟಕದಿಂದ ಕಿತ್ತು, ಉತ್ತರದ ರಾಜ್ಯಗಳಿಗೆ ಹಂಚುತ್ತಾ, ರಾಜ್ಯಕ್ಕೆ ಸಲ್ಲಬೇಕಾದ ತೆರಿಗೆ ಪಾಲು ನೀಡದೆ ಅನ್ಯಾಯವೆಸಗಿದ ನರೇಂದ್ರ ಮೋದಿ ಅವರೇ, ನೀವು ಎಸಗಿದ ದ್ರೋಹಕ್ಕೆ ಅನಂತಾನಂತ ಧನ್ಯವಾದಗಳು!” #ThankYouModi ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.