ಪಡುಬಿದ್ರಿ: ಕ್ಷುಲಕ ಕಾರಣಕ್ಕೆ ಇತ್ತಂಡಗಳ ನಡುವೆ ಗಲಾಟೆ-ದೂರು ಪ್ರತಿದೂರು ದಾಖಲು
ಪಡುಬಿದ್ರಿ ಫೆ.27 (ಉಡುಪಿ ಟೈಮ್ಸ್ ವರದಿ) :ಕ್ಷುಲ್ಲಕ ಕಾರಣಕ್ಕೆ ಇತ್ತಂಡಗಳ ನಡುವೆ ಗಲಾಟೆ ನಡೆದು ಹಲ್ಲೆ ನಡೆಸಿರುವ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದೆ
ಈ ಬಗ್ಗೆ ಕಾಪು ತಾಲೂಕಿನ ನಡ್ಸಾಲು ಗ್ರಾಮದ ಶಿವಪ್ರಕಾಶ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಫೆ.25 ರಂದು ರಾತ್ರಿ ವೇಳೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ನಡೆಯುತ್ತಿರುವ ಢಕ್ಕೆಬಲಿ ಪೂಜೆಗೆ ಶಿವಪ್ರಕಾಶ್ ಅವರು ಅವರ ತಮ್ಮ ಆದರ್ಶ್, ಹಾಗೂ ಇಬ್ಬರು ಸ್ನೇಹಿತರಾದ ಧನುಷ್ ಮತ್ತು ಪ್ರತೀಕ್ ಎಂಬುವರೊಂದಿಗೆ ಹೋಗಿದ್ದರು. ಫೆ.26 ರ ನಡುರಾತ್ರಿ 1 ಗಂಟೆ ಸುಮಾರಿಗೆ ಶಿವಪ್ರಕಾಶ್ ಅವರು ಮೂತ್ರ ವಿಸರ್ಜನೆಗೆಂದು ಹೋದ ಸಮಯ ಆರೋಪಿತರಾದ ವಸಂತ ಹಾಗೂ ಬಾಲು ಅಲ್ಲಿದೆ ಬಂದು ಅವಾಚ್ಯ ಶಬ್ಧಗಳಿಂದ ಬೈದು, ಹೊಡೆದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.
ಇದೇ ಘಟನೆಗೆ ಸಂಬಂಧಿಸಿ ನವೀನ್ ಎಂಬವರೂ ಪೊಲೀಸರಿಗೆ ಪ್ರತಿ ದೂರು ನೀಡಿದ್ದು, ಇವರು ಫೆ.25 ರಂದು ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ನಡೆಯುತ್ತಿರುವ ಢಕ್ಕೆಬಲಿ ಉತ್ಸವಕ್ಕೆ ಅವರ ಸ್ನೇಹಿತರಾದ ರಾಕೇಶ್, ದಿವಾಕರ, ಬಾಲಕೃಷ್ಣ ಎಂಬುವವರ ಜೊತೆಗೆ ಹೋಗಿದ್ದು, ನಡುರಾತ್ರಿ 1 ಗಂಟೆ ಸುಮಾರಿಗೆ ಬ್ರಹ್ಮಸ್ಥಾನದ ನೀರಿನ ಟ್ಯಾಂಕ್ ಬಳಿ ಬ್ರಹ್ಮಸ್ಥಾನದ ಕಡೆಗೆ ಹೋಗುತ್ತಿರುವಾಗ ಆರ್ & ಆರ್ ಕಾಲೋನಿ ಕಂಚಿನಡ್ಕದ ನಿವಾಸಿ ಉಮಾನಾಥ ರವರ ಮಗ ಶಿವಪ್ರಕಾಶ್ ಎಂಬಾತನು ಇವರನ್ನು ತಡೆದು ನಿಲ್ಲಿಸಿ ವಸಂತ ಎಲ್ಲಿದ್ದಾನೆ ಎಂದು ಕೇಳಿ ಚೂರಿ ಹಾಕಿ ಕೊಲ್ಲುತ್ತೇನೆ ಎಂದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಎರಡು ಘಟನೆಗೆ ಸಂಬಂಧಿಸಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ಪ್ರತಿದೂರು ದಾಖಲಾಗಿದೆ.