ಪ್ರಧಾನಿ ಮೋದಿಯಿಂದ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ

ಶಿವಮೊಗ್ಗ, ಫೆ.27 : ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ತಾಲೂಕಿನ ಸೋಗಾನೆಯಲ್ಲಿ 449 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣವನ್ನು ಇಂದು ಮಧ್ಯಾಹ್ನ ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಎಂದು ಕನ್ನಡದಲ್ಲಿ ಮಾತು ಆರಂಭಿಸಿ, ಮೊದಲು ಮುಖ್ಯ ನಗರಗಳಲ್ಲಿ ಮಾತ್ರ ಅಭಿವೃದ್ಧಿಯಾಗುತ್ತಿತ್ತು. ಈಗ ಹಳ್ಳಿ ಹಳ್ಳಿಗಳಿಗೆ ಅಭಿವೃದ್ದಿ ತಲುಪುತ್ತಿದೆ. ಶಿವಮೊಗ್ಗದ ಬಹು ಕಾಲದ ಕನಸು ಇಂದು ನನಸಾಗಿದೆ. ಈ ವಿಮಾನ ನಿಲ್ದಾಣವು ಭವ್ಯವಾಗಿ, ಸುಂದರವಾಗಿದೆ. ಇದು ಕೇವಲ ವಿಮಾನ ನಿಲ್ದಾಣವಲ್ಲ ರಾಜ್ಯದ ಸಂಪ್ರದಾಯ ಮತ್ತು ತಂತ್ರಜ್ಞಾನದ ಸಂಗಮವಾಗಿದೆ ಎಂದರು.

ವಾಹನವಿರಲಿ, ಸರ್ಕಾರವೇ ಆಗಲಿ, ಡಬಲ್ ಇಂಜಿನ ನಲ್ಲಿ ವೇಗ ಜಾಸ್ತಿಯಾಗುತ್ತದೆ. ಬಿಜೆಪಿಯ ಡಬಲ್ ಇಂಜಿನ್ ಸರಕಾರದ ಪ್ರಗತಿ ರಥ ವೇಗದಿಂದ ಓಡುತ್ತಿದೆ. 2014ರ ಮೊದಲು ದೇಶದಲ್ಲಿ ದೊಡ್ಡ ನಗರದಲ್ಲಿ ಮಾತ್ರ ವಿಮಾನ ನಿಲ್ದಾನವಿತ್ತು. ಸಣ್ಣ ನಗರಗಳಲ್ಲಿ ವಿಮಾನ ನಿಲ್ದಾಣ ಮಾಡುವ ಬಗ್ಗೆ ಕಾಂಗ್ರೆಸ್ ಯೋಚನೆಯೂ ಮಾಡಿರಲಿಲ್ಲ. ನಾವು ಈಗ ದೇಶದ ಸಣ್ಣ ನಗರಗಳಲ್ಲೂ ಏರ್ ಪೋರ್ಟ್ ಮಾಡುತ್ತಿದ್ದೇವೆ. ಹವಾಯಿ ಚಪ್ಪಲ್ ಹಾಕುವವನು ಕೂಡಾ ವಿಮಾನ ಪ್ರಯಾಣ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಅದಕ್ಕೆ ನಾವು ಉಡಾನ್ ಯೋಜನೆ ಆರಂಭಿಸಿದ್ದೇವೆ. ಈಗ ಸಾಮಾನ್ಯರು ಕೂಡಾ ವಿಮಾನಯಾನ ಮಾಡುವುದು ಸಾಧ್ಯವಾಗಿದೆ ಎಂದು ಹೇಳಿದರು.

ಮೊದಲು ಏರ್ ಇಂಡಿಯಾದ ಬಗ್ಗೆ ಕೆಟ್ಟ ಸುದ್ದಿಗಳೆ ಬರುತ್ತಿತ್ತು. ಆದರೆ ಈಗ ಏರ್ ಇಂಡಿಯಾ ಭಾರತದ ಹೊಸ ಸಾಮಥ್ರ್ಯದ ರೂಪದಲ್ಲಿ ವಿಶ್ವದಲ್ಲಿ ಹೊಸ ಎತ್ತರಕ್ಕೆ ಸಾಗುತ್ತಿದೆ. ಮುಂದಿನ ದಿಗಳಲ್ಲಿ ಸಾವಿರಾರು ವಿಮಾನದ ಅಗತ್ಯ ಭಾರತಕ್ಕೆ ಆಗಲಿದೆ. ಅದೇ ವೇಳೆ ಯುವ ಜನತೆಗೆ ಉದ್ಯೋಗ ಸೃಷ್ಟಿಯೂ ಆಗಲಿದೆ ಎಂದು ಹೇಳಿದರು ಹಾಗೂ ಈಗ ನಾವು ವಿದೇಶದಿಂದ ವಿಮಾನಗಳನ್ನು ಖರೀದಿ ಮಾಡುತ್ತಿದ್ದೇವೆ. ಆದರೆ ಮೇಡ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವ ದಿನಗಳು ಬಹಳ ದೂರವಿಲ್ಲ ಎಂದು ತಿಳಿಸಿದರು

ಇನ್ನು ತಮ್ಮ ಭಾಷಣದುದ್ದಕ್ಕೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರನ್ನು ಹಾಡಿಹೊಗಳಿದ ಅವರು, ಇಂದು ಹಿರಿಯ ನಾಯಕ ಯಡಿಯೂರಪ್ಪನವರ ಜನ್ಮದಿನ. ಅವರ ಆರೋಗ್ಯಕ್ಕೆ ನಾವೆಲ್ಲರೂ ಪ್ರಾರ್ಥಿಸೋಣ. ಅವರು ಜೀವನವು ಬಡವರ, ರೈತರ ಕಲ್ಯಾಣಕ್ಕೆ ಸಮರ್ಪಿಸಿದ್ದಾರೆ. ಕೆಲ ದಿನಗಳ ಹಿಂದೆ ಅವರು ವಿಧಾನಸಭೆಯಲ್ಲಿ ಮಾಡಿದ ಭಾಷಣವು ಸಾರ್ವಜನಿಕ ಜೀವನದಲ್ಲಿರುವ ಎಲ್ಲರಿಗೂ ಒಂದು ಪ್ರೇರಣೆಯಾಗಿದೆ. ಅವರ ಜೀವನ ಎಂದಿಗೂ ಪ್ರೇರಣೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಚಿವರಾದ ನಾರಾಯಣಗೌಡ, ಭೈರತಿ ಬಸವರಾಜ್, ಸಂಸದ ಬಿ.ವೈ.ರಾಘವೇಂದ್ರ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

ಇದೇವೇಳೆ ನರೇಂದ್ರ ಮೋದಿಯವರು ಶಿವಮೊಗ್ಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ, ಉದ್ಘಾಟನೆಯನ್ನೂ ನೆರವೇರಿಸಿದರು.

775 ಎಕರೆ ಪ್ರದೇಶದಲ್ಲಿ ತಲೆಯೆತ್ತಿರುವ ಶಿವಮೊಗ್ಗ ವಿಮಾನ ನಿಲ್ದಾಣವು 3,04 ಕಿ.ಮೀ. ಉದ್ದದ ರನ್ ವೇಯನ್ನು ಹೊಂದಿದೆ.

Leave a Reply

Your email address will not be published. Required fields are marked *

error: Content is protected !!