ವಿಧಾನ ಸಭಾ ಚುನಾವಣೆಯು ಟಿಪ್ಪು-ಸಾವರ್ಕರ್ ಕದನ- ನಳೀನ್ ಹೇಳಿಕೆ ನಾನು ಒಪ್ಪುವುದಿಲ್ಲ- ಬಿಎಸ್ವೈ
ಬೆಂಗಳೂರು ಫೆ.27 : ಮುಂದಿನ ವಿಧಾನ ಸಭಾ ಚುನಾವಣೆಯು ಟಿಪ್ಪು-ಸಾವರ್ಕರ್ ಕದನ ಎಂದಿರುವ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ.
ಬಿಜೆಪಿ ಪಕ್ಷದ ಧೋರಣೆಯು ಅಭಿವೃದ್ಧಿಯನ್ನು ಬಿಟ್ಟು ಟಿಪ್ಪು-ಸಾವರ್ಕರ್ನಂತಹ ವಿಷಯಗಳಿಗೆ ಬದಲಾಗುತ್ತಿದೆಯೇ? ಎಂಬ ಪ್ರಶ್ನೆಗೆ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ನಾನು ಅವರ (ನಳಿನ್) ಹೇಳಿಕೆಯನ್ನು ಒಪ್ಪುವುದಿಲ್ಲ. ಆದರೆ ಪ್ರಮುಖ ವಿಷಯವೇನೆಂದರೆ ನಾವು ತುಂಬಾ ಶ್ರಮಪಡಬೇಕಾಗಿದೆ. ಬಿಜೆಪಿಯನ್ನು ಸೋಲಿಸಲು ಅತ್ತ ಕಾಂಗ್ರೆಸ್ ಕೂಡಾ ಶ್ರಮಿಸುತ್ತಿದೆ. ಮೋದಿ ಮತ್ತು ಅಮಿತ್ ಶಾ ಅವರ ಕಾರಣದಿಂದ ನಾನು ಬಹುಮತ ಪಡೆಯುವ ಕುರಿತು ತುಂಬಾ ಆತ್ಮವಿಶ್ವಾಸದಲ್ಲಿದ್ದೇನೆ. ಕಾಂಗ್ರೆಸ್ ಅಥವಾ ಜೆಡಿಎಸ್ ಕುರಿತು ನಾವು ತಲೆಕೆಡಿಸಿಕೊಂಡಿಲ್ಲ” ಎಂದು ಹೇಳಿದ್ದಾರೆ.
ಬಿಜೆಪಿಗೆ ಇನ್ನು ಯಾವ ನಿರೂಪಣೆಯು ಹೊಂದಿಕೊಳ್ಳಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಕಷ್ಟಪಟ್ಟು ಕೆಲಸ ಮಾಡು’ ಎಂಬ ಮಂತ್ರದೊಂದಿಗೆ ಬಿಜೆಪಿ ಕೆಲಸ ಮಾಡಲಿದೆ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಮಾಡಿರುವ ಉತ್ತಮ ಕಾರ್ಯಯೋಜನೆಗಳನ್ನು, ಅದರ ಸಂದೇಶಗಳನ್ನು ಮನೆ ಮನೆಗೆ ತಲುಪಿಸಬೇಕಾಗಿದೆ ಎಂದು ತಿಳಿಸಿದರು.