ವಿಷಯಾಧಾರಿತ ಶಿಕ್ಷಣ, ಜಾಗೃತಿ ಕಾರ್ಯಕ್ರಮ
ಶಿರ್ವ ಫೆ.25 (ಉಡುಪಿ ಟೈಮ್ಸ್ ವರದಿ): ನೆಹರೂ ಯುವ ಕೇಂದ್ರ ಉಡುಪಿ ಇದರ ಪ್ರಾಯೋಜಕತ್ವದಲ್ಲಿ ಶಿರ್ವ ಮಹಿಳಾ ಮಂಡಲ, ಬಂಟಕಲ್ಲು ಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ಇವರ ಸಂಯುಕ್ತ ಸಹಭಾಗಿತ್ವದಲ್ಲಿ ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿನಲ್ಲಿ ಯುವ ಜನತೆಗೆ ವಿಷಯಾಧಾರಿತ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮವು ಜರುಗಿತು.
ಶಿರ್ವ ಗ್ರಾಮ ಪಂಚಾಯತ್ ನ ಅಧ್ಯಕ್ಷ ರತನ್ ಕುಮಾರ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ತಂದೆ ತಾಯಿಗಳು ಮಕ್ಕಳ ಬಗ್ಗೆ ಅನೇಕ ಕನಸುಗಳನ್ನು ಕಟ್ಟಿ ಅವರನ್ನು ಅತ್ಯಂತ ಪ್ರೀತಿಯಿಂದ ಬೆಳೆಸುತ್ತಾರೆ, ಉನ್ನತ ವಿದ್ಯಾಭ್ಯಾಸಕ್ಕಾಗಿ ಕಾಲೇಜುಗಳಿಗೆ ಕಳುಹಿಸುತ್ತಾರೆ. ಕೆಲವರು ಒಳ್ಳೆಯ ಗುಣನಡತೆಯಿಂದ ತಂದೆ ತಾಯಿಯ ಕನಸನ್ನು ನನಸು ಮಾಡಲು ಪ್ರಯತ್ನಿಸಿದರೆ, ಇನ್ನು ಕೆಲವರು ಯೌವನದ ಅಮಲಲ್ಲಿ ಮಾದಕ ವ್ಯಸನಿ ಗೀಳಾಗಿ, ಇನ್ನಿತರ ದುಶ್ಚಟಗಳಿಗೆ ದಾಸರಾಗಿ ಹೆತ್ತವರ ಕನಸುಗಳನ್ನು ನುಚ್ಚು ನೂರು ಮಾಡಿಬಿಡುತ್ತಾರೆ. ಇದು ಸಲ್ಲದು. ಪ್ರತೀಯೊಬ್ಬ ವಿದ್ಯಾರ್ಥಿಗಳೂ ತಂದೆ ತಾಯಿಯ ಪ್ರೀತಿ ಮತ್ತು ತ್ಯಾಗಗಳನ್ನು ಸದಾ ಸ್ಮರಿಸಿಕೊಂಡು ಅವರ ಆಶಯದಂತೆ ಸತ್ಪ್ರಜೆಗಳಾಗಲು ಕಾಲೇಜ್ ಜೀವನದಲ್ಲೇ ಮುನ್ನುಡಿ ಬರೆಯಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಈ ವೇಳೆ ನೆಹರೂ ಯುವ ಕೇಂದ್ರ ಉಡುಪಿ ಇದರ ಜಿಲ್ಲಾ ಯುವ ಅಧಿಕಾರಿ ವಿಲ್ಫ್ ರೆಡ್ ಡಿಸೋಜಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಜನಸಂಖ್ಯೆಯ ಸುಮಾರು ಶೇಕಡಾ 62ರಷ್ಟು ಮಂದಿ ಯುವಕರೇ ಆಗಿದ್ದಾರೆ. ನಮ್ಮ ಯುವಕರಲ್ಲಿ ಅಗಾಧ ಶಕ್ತಿ ಇದೆ. ಸರಿಯಾದ ಮಾರ್ಗದರ್ಶನ ಹಾಗೂ ಮಾಹಿತಿಗಳು ಯುವಕರಿಗೆ ಸಕಾಲದಲ್ಲಿ ಸಿಕ್ಕಿದಲ್ಲಿ ಅವರಿಂದ ಈ ದೇಶ ಮುನ್ನಡೆಯಬಹುದು. ಆದರೆ ದುರಾದೃಷ್ಟವಶಾತ್ ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದನ್ನು ನಿಲ್ಲಿಸಬೇಕಾದರೆ ನಾವೆಲ್ಲರೂ ಸೇರಿ ಅವರನ್ನು ಸರಿದಾರಿಗೆ ತರಲು ಪ್ರಯತ್ನಗಳನ್ನು ಮಾಡಬೇಕು. ಈ ನಿಟ್ಟಿನಲ್ಲಿ ವಿಷಯಾಧಾರಿತ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮ ಹೆಚ್ಚು ಪರಿಣಾಮಕಾರಿ ಎಂದು ಹೇಳಿದರು.
ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ತಿರುಮಲೇಶ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಜೇಸೀ ತರಬೇತುದಾರ ಪ್ರಶಾಂತ್ ಶೆಟ್ಟಿ, ಶಿರ್ವ ಗ್ರಾಮಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್, ಕಾರ್ಕಳ ತಾಲೂಕಿನ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರೇವತಿ ನಾಯಕ್ ಮತ್ತು ನ್ಯಾಯವಾದಿ ಬಿರ್ತಿ ಮಿತೇಶ್ ಶೆಟ್ಟಿ ಅವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಕಾರ್ಯದರ್ಶಿ ಡಾ.ಸ್ಪೂರ್ತಿ ಶೆಟ್ಟಿ, ಸದಸ್ಯರಾದ ಸುನೀತಾ ಸದಾನಂದ, ಶ್ವೇತಾ, ಸುಮಾ ಬಾಮನ್, ಸುನಾಲಿನಿ ರತನ್ ಶೆಟ್ಟಿ, ಶಿರ್ವ ಗ್ರಾಮಪಂಚಾಯತ್ ನ ಉಪಾಧ್ಯಕ್ಷ ಗ್ರೇಸಿ ಕಾರ್ಡೊಜಾ, ಗಣೇಶ ಆಚಾರ್ಯ, ಶಿರ್ವ ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ವಾಗ್ಳೆ, ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿನ ಎನ್ನೆಸ್ಸೆಸ್ ಸಂಯೋಜಕ ನಾಗರಾಜ ರಾವ್ ಮುಂತಾದವರು ಉಪಸ್ಥಿತರಿದ್ದರು.