ಪಿಂಚಣಿ ಸೌಲಭ್ಯ ವಿಚಾರ :ನಿವೃತ್ತ ನೌಕರ ಸಾವು- ಇದೇನಾ ಅಚ್ಚೆ ದಿನಗಳ ವೈಭವ -ಕಾಂಗ್ರೆಸ್ ಟೀಕೆ
ಬೆಂಗಳೂರು ಫೆ.25 :ಪಿಂಚಣಿ ನೀಡಲು ಸಾಧ್ಯವಿಲ್ಲ ಎಂದಿರುವ ಬೊಮ್ಮಾಯಿ ಅವರೇ, ಡಬಲ್ ಎಂಜಿನ್ ಯೋಗ್ಯತೆ ಇಷ್ಟೇನಾ? ಬಿಜೆಪಿಗರೇ ಇದೇನಾ ನಿಮ್ಮ ಅಚ್ಛೆ ದಿನಗಳ ವೈಭವ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, `ಹೃದಯಶೂನ್ಯ ಬಿಜೆಪಿ ಸರ್ಕಾರದ ಕ್ರೌರ್ಯಕ್ಕೆ ಇನ್ನೆಷ್ಟು ಬಲಿ ಬೇಕು?, ಪ್ರತಿಭಟಿಸುತ್ತಿದ್ದ ನಿವೃತ್ತ ನೌಕರರೊಬ್ಬರು ಸಾವನ್ನಪ್ಪಿದ್ದಾರೆ. ಪಿಂಚಣಿ ನೀಡಲು ಸಾಧ್ಯವಿಲ್ಲ ಎಂದಿರುವ ಬೊಮ್ಮಾಯಿ ಅವರೇ, ಡಬಲ್ ಎಂಜಿನ್ ಯೋಗ್ಯತೆ ಇಷ್ಟೇನಾ? ಬಿಜೆಪಿಗರೇ ಇದೇನಾ ನಿಮ್ಮ ಅಚ್ಛೆ ದಿನಗಳ ವೈಭವ, ಜನರ ಸಾವುಗಳೇ ಬಿಜೆಪಿಗೆ ಶಾಪವಾಗಿ ಪರಿಣಮಿಸಲಿವೆ’ ಎಂದು ಕಾಂಗ್ರೆಸ್ ಕಿಡಿಕಾರಿದೆ.
‘ಪಿಂಚಣಿ ಸೌಲಭ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸಲಾಗುತ್ತಿದ್ದ ಪ್ರತಿಭಟನೆಯಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು ನಿವಾಸಿ ಸಿದ್ದಯ್ಯ ಹಿರೇಮಠ (67) ಎಂಬುವವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ.
ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮೊದಲ ದಿನದಿಂದಲೇ ಪಾಲ್ಗೊಂಡಿದ್ದರು. ಪ್ರತಿಭಟನೆ ಸ್ಥಳದಲ್ಲಿ ಗುರುವಾರ ಹಾಜರಿದ್ದ ಸಿದ್ದಯ್ಯ ಹಿರೇಮಠ ಹಾಗೂ ವೆಂಕಟರಾಜು, ‘ಸರ್ಕಾರ ನಮ್ಮ ಬೇಡಿಕೆ ಈಡೇರಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿ ವಿಷ ಕುಡಿದಿದ್ದರು. ಅವರಿಬ್ಬರನ್ನೂ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಸಿದ್ದಯ್ಯ ಮೃತಪಟ್ಟಿದ್ದು, ವೆಂಕಟರಾಜು ಆರೋಗ್ಯ ಸ್ಥಿತಿಯೂ ಗಂಭೀರವಾಗಿದೆ ಎಂದು ಮಾದ್ಯಮ ವರದಿ ಮಾಡಿದೆ.