ಕಾಂಗ್ರೆಸ್ ನ ಅಧಿನಾಯಕಿ ಸೋನಿಯಾ ಗಾಂಧಿ ರಾಜಕೀಯ ನಿವೃತ್ತಿಯ ಸುಳಿವು?
ನವದೆಹಲಿ ಫೆ.25 : “ಭಾರತ್ ಜೋಡೋ ಯಾತ್ರೆಯೊಂದಿಗೆ ನನ್ನ ಇನ್ನಿಂಗ್ಸ್ ಮುಕ್ತಾಯವಾಗಬಹುದು ಎಂದು ಕಾಂಗ್ರೆಸ್ ಸಂಸದೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹೇಳಿದ್ದು, ಇದು ಅವರು ಪರೋಕ್ಷವಾಗಿ ತಮ್ಮ ರಾಜಕೀಯ ನಿವೃತ್ತಿ ಬಗ್ಗೆ ಸುಳಿವು ನೀಡಿರುವುದೇ ಎಂಬ ಬಗ್ಗೆ ಬಾರೀ ಚರ್ಚೆಗಳು ನಡೆಯುತ್ತಿದೆ.
ರಾಯ್ ಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಮಹಾ ಅಧಿವೇಶನದ ಎರಡನೇ ದಿನ, ಪಕ್ಷದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾಗಾಂಧಿ ಅವರು, 2004, 2009ರಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿರುವುದು ನನಗೆ ತುಂಬಾ ತೃಪ್ತಿ ಕೊಟ್ಟಿದೆ. ಅದೇ ರೀತಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ಒಂದು ದಶಕಗಳ ಕಾಲದ ಆಡಳಿತವನ್ನು ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದ್ದಾರೆ. ಇದರೊಂದಿಗೆ ತಾನು ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿರುವುದು ತನ್ನ ರಾಜಕೀಯದ ಕೊನೆಯ ಇನ್ನಿಂಗ್ಸ್ ಎಂದು ತಿಳಿಸಿ ಇದು ಕಾಂಗ್ರೆಸ್ ಗೆ ಟರ್ನಿಂಗ್ ಪಾಯಿಂಟ್ ಎಂದು ಬಣ್ಣಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಬಿಜೆಪಿ ಆಡಳಿತ ವೈಖರಿಯ ಈ ಸಮಯ ಕಾಂಗ್ರೆಸ್ ಮತ್ತು ಇಡೀ ದೇಶಕ್ಕೆ ಸವಾಲಿನದ್ದಾಗಿದೆ. ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶದಲ್ಲಿರುವ ಪ್ರತಿಯೊಂದು ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಹಿಡಿತಕ್ಕೆ ತೆಗೆದುಕೊಂಡು ಬುಡಮೇಲು ಮಾಡಿದೆ. ಇದರ ಪರಿಣಾಮ ಕೆಲವು ಉದ್ಯಮಿಗಳಿಗೆ ಮಾತ್ರ ಅವಕಾಶ ನೀಡುವ ಮೂಲಕ ಆರ್ಥಿಕ ವಿನಾಶಕ್ಕೆ ಕಾರಣವಾಗುತ್ತಿದೆ ಎಂದು ದೂರಿದ್ದಾರೆ. ಹಾಗೂ ಕೇಸರಿ ಪಕ್ಷ ದೇಶದಲ್ಲಿರುವ ಪ್ರತಿಯೊಂದು ಸಂಸ್ಥೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅದನ್ನು ನಾಶಗೊಳಿಸುತ್ತಿದೆ ಎಂದು ಟೀಕಿಸಿದ್ದಾರೆ.