ಉಡುಪಿ: ಕಳವಾದ ಮೊಬೈಲ್ ದುರ್ಬಳಕೆ ತಡೆಯಲು ಹೊಸ ವಿಧಾನ ಜಾರಿ: ಎಸ್ಪಿ
ಉಡುಪಿ, ಫೆ.25: ಕಳವಾದ ಫೋನ್ ಗಳ ದುರ್ಬಳಕೆಯನ್ನು ತಡೆಗಟ್ಟುವ ಸಲುವಾಗಿ ಪೊಲೀಸ್ ಇಲಾಖೆ ನೂತನ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಕ್ಷಯ್ ಹಾಕೇ ಮಚ್ಚೀಂದ್ರ ಅವರು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು, ಕಳವಾದ ಫೋನ್ ಗಳ ದುರ್ಬಳಕೆಯನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಟೆಲಿ ಕಮ್ಯುನಿಕೇಶನ್ ಇಲಾಖೆ ಜಾರಿಗೆ ತಂದಿರುವ ಬ್ಲಾಕ್ ಮಾಡುವ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಮೊಬೈಲ್ ಫೋನ್ ಕಳವು, ಸುಲಿಗೆ ಅಥವಾ ಕಳೆದುಹೋದರೆ ತಕ್ಷಣವೇ KSP E LOST ಅಪ್ಲಿಕೇಶನ್‍ನಲ್ಲಿ ದೂರು ಸಲ್ಲಿಸಿ, ಡಿಜಿಟಲ್ ಇ ಅಕ್ನಾಲೆಡ್ಜ್‍ಮೆಂಟ್ ಪಡೆದುಕೊಳ್ಳಬೇಕು ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ ಸ್ವೀಕೃತಿಯನ್ನು ಪಡೆದುಕೊಳ್ಳಬೇಕು. ಈ ಸ್ವೀಕೃತಿಯ ಪ್ರತಿಯನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು ಎಂದು ತಿಳಿಸಲಾಗಿದೆ.
ಕಳೆದುಕೊಂಡಿರುವ ಸಿಮ್ ಕಾರ್ಡ್‍ನ್ನು ಸಂಬಂಧಿತ ಸೇವಾ ಪೂರೈಕೆದಾರರಿಂದ ನಕಲಿಯಾಗಿ ಪಡೆದುಕೊಂಡು ಸಕ್ರಿಯಗೊಳಿಸಬೇಕು. CEIR(ಸೆಂಟ್ರಲ್ ಇಕ್ಯುಪ್‍ಮೆಂಟ್ ಐಡೆಂಟಿ ರಿಜಿಸ್ಟ್ರರ್) ಪೋರ್ಟಲ್‍ನಲ್ಲಿ OTP ಪಡೆಯಲು ಈ ಸಿಮ್ ಚಾಲನೆಯಲ್ಲಿದ್ದರೆ ಅನುಕೂಲವಾಗುತ್ತದೆ. https://www.ceir.gov.in ವೆಬ್‍ಸೈಟ್‍ಗೆ ಹೋಗಿ ತಮ್ಮ ಕಳವಾದ ಮೊಬೈಲ್ ಫೋನ್‍ಗಳ ಮಾಹಿತಿಯನ್ನು ನಮೂದಿಸಬೇಕು. ನಂತರ ಬರುವ ರಿಕ್ವೆಸ್ಟ್ ಐಡಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಈ ಮಾಹಿತಿ ನಮೂದಿಸಿದ 24 ಗಂಟೆಗಳಲ್ಲಿ ತಮ್ಮ ಮೊಬೈಲ್ ಫೋನ್ ಬ್ಲಾಕ್ ಆಗುತ್ತದೆ. ನಂತರ ಯಾರೂ ಕೂಡ ಆ ಮೊಬೈಲ್‍ನ್ನು ದುಬಳರ್ಕೆ ಮಾಡಲು ಸಾಧ್ಯವಾಗುವುದಿಲ್ಲ. ಮುಂದೆ ಕಳವಾದ ಮೊಬೈಲ್ ಫೋನ್ ಪತ್ತೆಯಾದರೆ CEIR ಪೋರ್ಟಲ್‍ನಲ್ಲಿ ಲಾಗಿನ್ ಆಗಿ ರಿಕ್ವೇಸ್ಟ್ ಐಡಿಯನ್ನು ನಮೂದಿಸಿ ಅನ್‍ಲಾಕ್ ಮಾಡಿ ಮೊಬೈಲ್‍ನ್ನು ಉಪಯೋಗಿಸಬಹುದು ಎಂದು ತಿಳಿಸಿದ್ದಾರೆ.