ಉಡುಪಿ: ಫೆ.26-“ಹಿಂದೂ ರಾಷ್ಟ್ರ ಜಾಗೃತಿ ಸಭೆ”
ಉಡುಪಿ, ಫೆ.25: ಹಿಂದೂಗಳಲ್ಲಿ ಲವ್ ಜಿಹಾದ್, ಭಯೋತ್ಪಾದನೆ ಹಾಗೂ ರಾಷ್ಟ್ರ ವಿರೋಧಿ ಕೃತ್ಯಗಳ ಬಗ್ಗೆ ಅರಿವು ಮೂಡಿಸಲು ಫೆ.26ರ ಸಂಜೆ 5 ಗಂಟೆಗೆ ರಾಷ್ಟ್ರ ಜಾಗೃತಿ ಸಭೆಯನ್ನು ಕಡಿಯಾಳಿಯ ಮಹಿಷಮರ್ದಿನಿ ದೇವಸ್ಥಾನದ ಶರ್ವಾಣಿ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ವಕ್ತಾರ ಗುರುಪ್ರಸಾದ್ ಗೌಡ ಹೇಳಿದ್ದಾರೆ.
ಉಡುಪಿಯ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಲವ್ ಜಿಹಾದ್, ಗೋ ಹತ್ಯೆ, ಮತಾಂತರ ನಿಷೇಧ ಕಾನೂನು ಜಾರಿಯಾಗಬೇಕು. ಹಿಂದೂ ರಾಷ್ಟ್ರಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು ಎಂಬ ಪರಿಕಲ್ಪನೆಯಲ್ಲಿ ಜಾಗೃತಿ ಸಭೆ ನಡೆಸುತ್ತಿದ್ದೇವೆ. ಚಿಕ್ಕಮಗಳೂರಿನ ಪತಂಜಲಿ ಯೋಗ ಸಮಿತಿಯ ದಿವಾಕರ್ ಭಟ್, ಮಂಗಳೂರು ಸನಾತನ ಸಂಸ್ಥೆಯ ಲಕ್ಷ್ಮೀ ಪೈ ಹಾಗೂ ಗುರುಪ್ರಸಾದ್ ಗೌಡ ಅವರು ಮುಖ್ಯ ವಕ್ತಾರರಾಗಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಧರ್ಮಜಾಗೃತಿಯ ಫ್ಲೆಕ್ಸ್, ಧರ್ಮಗ್ರಂಥ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ಹಿಂದೂ ರಾಷ್ಟ್ರ ಎಂದರೆ ಯಾರನ್ನು ಓಡಿಸುವ ಅಥವಾ ಯಾರ ಮೇಲು ದೌರ್ಜನ್ಯ ಮಾಡುವುದಲ್ಲ, ಹಿಂದೂಗಳನ್ನು ಒಗ್ಗೂಡಿಸುವುದು ರಾಮ ರಾಜ್ಯದ ಪರಿಕಲ್ಪನೆಯಾಗಿದೆ. ಈಗ ರಾಜಕೀಯ ವಲಯದಲ್ಲಿ ಹಿಂದೂ ರಾಷ್ಟ್ರದ ಬಗ್ಗೆ ಚರ್ಚೆಯಾಗುತ್ತಿದೆ. ಭಾರತವನ್ನು ಹಿಂದೂ ರಾಷ್ಟ್ರವಾಗಿ ಸ್ಥಾಪಿಸಲು ಹೋರಾಟದ ಜೊತೆಗೆ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರಂತರ ಮಾಡುತ್ತಿದ್ದೇವೆ. ಈಗಾಗಲೇ 13 ರಾಜ್ಯಗಳಲ್ಲಿ 7 ಭಾಷೆಗಳಲ್ಲಿ 2,127ಕ್ಕೂ ಅಧಿಕ ಕಡೆಗಳಲ್ಲಿ ಜಾಗೃತಿ ಸಭೆ ನಡೆಸಲಾಗಿದೆ. ಈ ವರ್ಷ 100ಕ್ಕೂ ಅಧಿಕ ಸಭೆ ನಡೆಸಲಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮನ್ವಯ ವಿಜಯ್ ಕುಮಾರ್, ಉದ್ಯಮಿಗಳಾದ ರಾಘವೇಂದ್ರ ಶೆಟ್ಟಿ, ಲಕ್ಷ್ಮೀ ನಾರಾಯಣ ಹೆಗ್ಡೆ, ನಿವೃತ್ತ ಉಪ ತಹಶೀಲ್ದಾರ್ ಶಶಿಧರ್ ಕಾರ್ಕಳ ಉಪಸ್ಥಿತರಿದ್ದರು.