ಮುಲ್ಕಿ: ಕಟೀಲು ಮೇಳ ಯಕ್ಷಗಾನದಲ್ಲಿ ದಲಿತರ ಅಪಹಾಸ್ಯ- ಕ್ಷಮೆಗೆ ಆಗ್ರಹ- ಉಗ್ರ ಪ್ರತಿಭಟನೆ ಎಚ್ಚರಿಕೆ
ಮುಲ್ಕಿ ಫೆ.25 : ಇತ್ತೀಚಿನ ದಿನಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದು ಯಕ್ಷಗಾನ ರಂಗದಲ್ಲಿ ಕೂಡ ದಲಿತರನ್ನು ಅಪಹಾಸ್ಯ ಮಾಡಲಾಗಿದೆ ಎಂದು ಅಂಬೇಡ್ಕರ್ ಯುವ ಸೇನೆ ಕಾಪು ತಾಲ್ಲೂಕು ಅಧ್ಯಕ್ಷ ಲೋಕೇಶ್ ಪಡುಬಿದ್ರಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಲ್ಕಿ ತಾಲೂಕು ಅಂಬೇಡ್ಕರ್ ಯುವಸೇನೆ ಶಾಖೆಯಿಂದ ಮುಲ್ಕಿಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟೀಲು ಮೇಳದ ಯಕ್ಷಗಾನದಲ್ಲಿ ದಲಿತರನ್ನು ಅಪಹಾಸ್ಯ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಬಗ್ಗೆ ಕಟೀಲು ಮೇಳದ ವ್ಯವಸ್ಥಾಪಕರನ್ನು ಸಂಪರ್ಕಿಸಿ ಬಹಿರಂಗವಾಗಿ ಕ್ಷಮೆ ಕೇಳುವಂತೆ ಹೇಳಿದ್ದರೂ ಇದುವರೆಗೂ ಯಾವ ಕ್ರಮ ಕೈಗೊಂಡಿಲ್ಲ. ಕೂಡಲೇ ಸಂಘಟಕರು ಕ್ಷಮೆ ಕೇಳಬೇಕು ಇಲ್ಲದಿದ್ದರೆ ಕಟೀಲು ಮೇಳದ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಹಾಗೂ ಇನ್ನು ಮುಂದಕ್ಕೆ ದಲಿತರ ನಿಂದನೆ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಕೃಷ್ಣ ಬಂಗೇರ, ಕಾರ್ಯದರ್ಶಿ ವಸಂತ ಪಾದೆಬೆಟ್ಟು,ಮುಲ್ಕಿ ತಾಲ್ಲೂಕು ಅಂಬೇಡ್ಕರ್ ಯುವ ಸೇನೆಯ ಅಧ್ಯಕ್ಷರಾದ ಶ್ರೀಪತಿ ಕೆರೆಕಾಡು, ಮಹಿಳಾ ಅಧ್ಯಕ್ಷೆ ಪಲ್ಲವಿ, ಕಾರ್ಯದರ್ಶಿ ನವೀನ್ ಬೊಲ್ಲಾರ್, ಗಣೇಶ್ ಇಂದಿರಾನಗರ,ಸಂಜನಾ ಮತ್ತಿತರರು ಉಪಸ್ಥಿತರಿದ್ದರು.