ದ.ಕ ಡಿಸಿ ವಿರುದ್ಧ ಶಿಷ್ಟಾಚಾರ ಉಲ್ಲಂಘನೆ ಆರೋಪ- ಸಿಎಂ ರಿಂದ ಕ್ರಮದ ಭರವಸೆ
ಬೆಂಗಳೂರು ಫೆ.25 : ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಅವರ ವಿರುದ್ಧ ಶಿಷ್ಟಾಚಾರ ಉಲ್ಲಂಘನೆ ಆರೋಪ ಕೇಳಿ ಬಂದಿದೆ.
ಈ ವಿಚಾರವಾಗಿ ಜೆಡಿಎಸ್ ಸದಸ್ಯ ಮರಿತಿಬ್ಬೇ ಗೌಡ ಅವರು ವಿಧಾನ ಪರಿಷತ್ ನಲ್ಲಿ ಪ್ರಸ್ತಾಪಿಸಿ, ಫೆಬ್ರವರಿ 3 ರಂದು ವಿಧಾನ ಪರಿಷತ್ ಸಭಾಪತಿಯವರು ಮಂಗಳೂರು ಪ್ರವಾಸ ಕೈಗೊಂಡಿದ್ದು, ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಡಿಸಿಗೆ ಪ್ರವಾಸ ವೇಳಾಪಟ್ಟಿ ಕಳಿಸಲಾಗಿತ್ತು. ಮಂಗಳೂರಿಗೆ ತಲುಪಿದ ಬಳಿಕ ಸಭಾಪತಿಗಳು ಕರೆ ಮಾಡಿದರೂ ಡಿಸಿ ಎಂ.ಆರ್. ರವಿಕುಮಾರ್ ಅವರು ಸ್ಪಂದಿಸಿಲ್ಲ ಎಂದು ಅರೋಪಿಸಿದ್ದಾರೆ.
ಹಾಗೂ ಜಿಲ್ಲಾಧಿಕಾರಿ ವಿಶ್ರಾಂತಿಯಲ್ಲಿ ಇದ್ದಾರೆ ಎಂದು ಡಿಸಿ ಆಪ್ತ ಸಹಾಯಕ ಹೇಳಿದ್ದಾರೆ, ಆದರೆ ಸೌಜನ್ಯಕ್ಕೂ ಸಭಾಪತಿಗಳನ್ನು ಭೇಟಿಯಾಗದ ಕಾರಣ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದ್ದು ಕೂಡಲೇ ಶಿಸ್ತು ಕ್ರಮ ಆಗಬೇಕು ಎಂದು ಸದನದಲ್ಲಿ ಅವರು ಆಗ್ರಹಿಸಿದ್ದರು.
ಈ ಬಗ್ಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರ ಕಳುಹಿಸುವಂತೆ ಮರಿತಿಬ್ಬೇಗೌಡರಿಗೆ ಸೂಚಿಸಿದರು, ಹಾಗೂ ತನಿಖೆ ಮಾಡಿಸಿ ಶಿಷ್ಟಾಚಾರ ಉಲ್ಲಂಘನೆ ಆಗಿದ್ದರೆ ಕ್ರಮ ಆಗುತ್ತದೆ ಎಂದು ಭರವಸೆ ನೀಡಿದರು ಎಂದು ತಿಳಿದು ಬಂದಿದೆ.