ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆದ “ಹಾರ್ಟ್ ಅಟ್ಯಾಕ್”
ನವದೆಹಲಿ ಫೆ.25 : ಈ ಹಿಂದೆಲ್ಲಾ ಹಿರಿಯರನ್ನು ಬಾಧಿಸುತ್ತಿದ್ದ ಹೃದಯಾಘಾತ ಇಂದು ವಯಸ್ಸಿನ ಪರಿ ಇಲ್ಲದೆ ಕಿರಿಯ ವಯಸ್ಸಿನವರನ್ನು ಬಲಿ ಪಡೆದುಕೊಳ್ಳುತ್ತಿದೆ. ಅದರಲ್ಲೂ ತಮ್ಮ ದೈಹಿಕ ಆರೋಗ್ಯವನ್ನು ಸದೃಢ ಇಟ್ಟುಕೊಳ್ಳುವ ಯುವಕರು , ಸಣ್ಣ ವಯಸ್ಸಿನ ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಆತಂಕ ಸೃಷ್ಟಿಸಿದೆ.
ಇದೀಗ ಆಂಧ್ರಪ್ರದೇಶದಲ್ಲಿ ನಿನ್ನೆ ಇದೇ ರೀತಿಯ 2 ಘಟನೆಗಳು ವರದಿಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತೀವ್ರ ಚರ್ಚೆ ನಡೆದಿದ್ದು, ಟ್ವಿಟರ್‌ನಲ್ಲಿ “ಹಾರ್ಟ್ ಅಟ್ಯಾಕ್” ವಿಚಾರವೇ ಟ್ರೆಂಡಿಂಗ್ ಆಗಿತ್ತು.
ಈ ವಿಚಾರ ಚರ್ಚೆಯಾಗುತ್ತಿದ್ದಂತೆ ಟ್ವಿಟರ್ ಬಳಕೆದಾರರು ವಿವಿಧೆಡೆ ಸಂಭವಿಸಿದ ಇದೇ ರೀತಿಯ ದೃಶ್ಯಗಳನ್ನು ಹಂಚಿಕೊಂಡಿದ್ದಾರಲ್ಲದೆ, ಇದಕ್ಕೆ ಕಾರಣವೇನು, ಸರಿಯಾದ ಸಮಯದಲ್ಲಿ ಮಾಡಬೇಕಾದ ಪ್ರಥಮ ಚಿಕಿತ್ಸೆಯೇನು ಎಂಬ ಬಗ್ಗೆ ಚರ್ಚಿಸಿದ್ದಾರೆ. ಸಮಯಪ್ರಜ್ಞೆ ಮೆರೆದು ಎಷ್ಟೋ ಮಂದಿಯ ಪ್ರಾಣ ಉಳಿಸಿದ ದೃಶ್ಯಾವಳಿಗಳನ್ನೂ ಹಂಚಿಕೊಂಡಿದ್ದಾರೆ.
ಹೈದರಾಬಾದ್‌ನಲ್ಲಿ 24 ವರ್ಷದ ಪೊಲೀಸ್ ಪೇದೆ ಯೊಬ್ಬರು ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ 40ರ ವಯಸ್ಸಿನ ವ್ಯಕ್ತಿಯೊಬ್ಬರು ಹಳದಿ( ಮೆಹೆಂದಿ) ಸಮಾರಂಭದಲ್ಲಿ ಭಾಗಿಯಾಗಿದ್ದಾಗಲೇ ಕುಸಿದು ಬಿದ್ದಿದ್ದರು. ಈ ಎರಡೂ ಪ್ರಕರಣಗಳಲ್ಲಿ ಮೃತರ ಸಾವಿಗೆ ಹೃದಯಾಘಾತವೇ ಕಾರಣ ಎಂದು ವರದಿಯಾಗಿದೆ.