ತಾಂತ್ರಿಕ ದೋಷ: ಸಮುದ್ರಕ್ಕೆ ಇಂಧನ ಸುರಿದು ತುರ್ತು ಭೂಸ್ಪರ್ಶವಾದ ಏರ್ ಇಂಡಿಯಾ ವಿಮಾನ
ತಿರುವನಂತಪುರಂ ಫೆ.24 : ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಕೋಝಿಕೋಡ್ ನಿಂದ ದಮ್ಮಾಮ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.
ಸುಮಾರು 168 ಪ್ರಯಾಣಿಕರನ್ನು ಏರ್ ಇಂಡಿಯಾ ವಿಮಾನವು ಕ್ಯಾಲಿಕಟ್‍ನ ಕರಿಪುರ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 9.44 ರ ಸುಮಾರಿಗೆ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಆದ್ದರಿಂದ ಪೈಲೆಟ್ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಅದೃಷ್ಟವಶಾತ್ ಯಾವುದೇ ತೊಂದರೆ ಇಲ್ಲದೆ ವಿಮಾನ ಭೂಸ್ಪರ್ಶವಾಗಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಕೋಝಿಕೋಡ್ ನಿಂದ ವಿಮಾನ ಟೇಕ್ ಆಫ್ ಆಗುವ ವೇಳೆ ವಿಮಾನದ ಹಿಂಭಾಗ ರನ್ ವೇಗೆ ಸ್ಪಷವಾಗಿದೆ ಎಂದು ಹೇಳಲಾಗಿದ್ದು ಇದರಿಂದಲೇ ತಾಂತ್ರಿಕ ದೋಷ ಕಂಡುಬಂದಿರಬಹುದು ಎಂದು ಹೇಳಲಾಗಿದೆ. ಭೂ ಸ್ಪರ್ಶ ಮಾಡುವ ವೇಳೆ ಹೆಚ್ಚಿನ ಅವಘಡ ಸಂಭವಿಸುವ ಮುನ್ನೆಚ್ಚರಿಕೆಯಿಂದಾಗಿ ವಿಮಾನದಲ್ಲಿದ್ದ ಹೆಚ್ಚಿನ ಇಂಧನವನ್ನು ಅರೇಬಿಯನ್ ಸಮುದ್ರಕ್ಕೆ ಸುರಿಯಲಾಗಿದೆ. ಬಳಿಕ ಭೂಸ್ಪರ್ಶ ಮಾಡಲಾಯಿತು ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ತಾಂತ್ರಿಕ ದೋಷ ಕಂಡುಬಂದ ಕೂಡಲೇ ವಿಮಾನದ ಪೈಲೆಟ್ ವಿಮಾನಯಾನ ಸಂಸ್ಥೆಗೆ ಮಾಹಿತಿ ನೀಡಿದ್ದರು. ಕೂಡಲೇ ಹತ್ತಿರದ ವಿಮಾನ ನಿಲ್ದಾಣವಾದ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಲಾಗಿದೆ ಈ ವೇಳೆ ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿ ತುರ್ತು ಪರಿಸ್ಥಿತಿ ಘೋಷಿಸಿ ಎಲ್ಲಾ ತುರ್ತು ವ್ಯವಸ್ಥೆಗಳನ್ನು ಮಾಡಿಕೊಂಡಿದ್ದರು, ಒಂದು ವೇಳೆ ಭೂಸ್ಪರ್ಶವಾಗುವ ಸಂದರ್ಭದಲ್ಲಿ ಬೆಂಕಿ ಅನಾಹುತ ಏನಾದರು ಸಂಭವಿಸಿದರೆ ಅದಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ.