ಹಿಜಾಬ್ ಧರಿಸಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಮುಸ್ಲಿಂ ಸಂಘಟನೆಗಳಿಂದ ಸರಕಾರಕ್ಕೆ ಮನವಿ
ಬೆಂಗಳೂರು ಫೆ.24 (ಉಡುಪಿ ಟೈಮ್ಸ್ ವರದಿ) : ರಾಜ್ಯದಲ್ಲಿ ಮಾ.9 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಲಿರುವ ಕಾರಣ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಮುಸ್ಲಿಂ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.
ಈಗಾಗಲೇ ಹಿಜಾಬ್ ವಿವಾದದ ಕುರಿತು ಕರ್ನಾಟಕದ ಮುಸ್ಲಿಂ ವಿದ್ಯಾರ್ಥಿನಿಯರ ಪರ ವಕೀಲ ಸುಪ್ರೀಂಕೋರ್ಟ್‍ಗೆ ಮತ್ತೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯಲಿದೆ. ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಸುಪ್ರೀಂಕೋರ್ಟ್‍ಗೆ ಪಿಐಎಲ್ ಸಲ್ಲಿಸಿದ್ದಾರೆ. ಈ ಬಗ್ಗೆ ಅರ್ಜಿ ವಿಚಾರಣೆಗೆ ಪೀಠ ರಚನೆ ಮಾಡಲಾಗುವುದು ಎಂದು ಸುಪ್ರೀಂಕೋರ್ಟ್ ಸಿಜೆಐ ಮಾಹಿತಿ ನೀಡಿದ್ದರು.
ಹಿಜಾಬ್ ಪ್ರಕರಣವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ವಕೀಲ ಶಾದನ್ ಫರಾಸತ್ ಪ್ರಸ್ತಾಪಿಸಿ, ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್ ನಿಷೇಧದಿಂದಾಗಿ ಹುಡುಗಿಯರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು.
ರಾಜ್ಯದಲ್ಲಿ ಹಿಜಾಬ್ ನಿಷೇಧದಿಂದ ಕಳೆದ ವರ್ಷ 5 ಸಾವಿರಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಇದರಿಂದ ವಿದ್ಯಾರ್ಥಿನಿಯರು ಶಿಕ್ಷಣವನ್ನು ಮೊಟಕುಗೊಳಿಸುವ ಸ್ಥಿತಿಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿಯಾದರೂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಮುಸ್ಲಿಂ ಸಂಘಟನೆಗಳು ಮನವಿ ಮಾಡಿವೆ.