ಸಿ.ಟಿ.ರವಿಗೆ ಉಚಿತ ಮಾಂಸದ ಊಟ ಪಾರ್ಸೆಲ್- ದೇವಸ್ಥಾನಕ್ಕೆ ಪ್ರವೇಶ ನಿಷೇಧಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು ಫೆ.24 : ಬಾಡೂಟ ಸೇವಿಸಿ ನಾಗಬನ ಮತ್ತು ದೇವಸ್ಥಾನಕ್ಕೆ ಭೇಟಿ ನೀಡಿದ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ. ರವಿ ಅವರಿಗೆ ದೇವಸ್ಥಾನಗಳಲ್ಲಿ ಪ್ರವೇಶವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಇಂದು ಕಾಂಗ್ರೆಸ್ ಪ್ರತಿಭಟನೆ ನಡೆಸಿತು.

ನಗರದಲ್ಲಿ ಇಂದು ಬೆಳಗ್ಗೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, `ಸಿ.ಟಿ.ರವಿ ಬಾಯಿ ತೆರೆದರೆ ಸುಳ್ಳು ಎಂಬುದು ಇಂದು ಮತ್ತೆ ಬಹಿರಂಗವಾಗಿದೆ. ಧಾರ್ಮಿಕ ಹೆಸರಿನಲ್ಲಿ ರಾಜಕೀಯ ನಡೆಸುವ ಸಿ.ಟಿ.ರವಿ ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿ ನಂತರ ನಾನು ದೇವಸ್ಥಾನಕ್ಕೆ ಹೋಗಿಲ್ಲ ಎಂದು ಹೇಳಿ ನಂತರ ಮಾಧ್ಯಮಗಳಲ್ಲಿ ದೇವಸ್ಥಾನ ಪ್ರವೇಶಿಸಿರುವುದು ಬಹಿರಂಗವಾದ ನಂತರ ನಾನು ಹೋಗಿದ್ದೆ ಎಂದು ಹೇಳಿದ್ದಾರೆ. ಇಂತಹ ಒಬ್ಬ ಸುಳ್ಳುಗಾರ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವುದು ಬಿಜೆಪಿ ಪಕ್ಷದ ಅವನತಿಗೆ ಮೂಲ ಕಾರಣವಾಗಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹಾಗೂ `ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ. ರವಿ ಅವರಿಗೆ ಇನ್ನು ಮುಂದೆ ಯಾವುದೇ ದೇವಾಲಯಕ್ಕೂ ಪ್ರವೇಶಿಸದಂತೆ ತಡೆಯಬೇಕು ತಕ್ಷಣ ಮಜರಾಯಿ ಇಲಾಖೆ, ಸಿ.ಟಿ ರವಿಗೆ ದೇವಸ್ಥಾನಗಳಲ್ಲಿ ಪ್ರವೇಶವನ್ನು ನಿಷೇಧಿಸಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ.

`ಪ್ರತಿನಿತ್ಯ ಸುಳ್ಳನ್ನೇ ಸತ್ಯ ಮಾಡುವ ಪರಿಪಾಠವನ್ನು ಮೈಗೂಡಿಸಿಕೊಂಡಿರುವ ಸಿ.ಟಿ. ರವಿ ತನ್ನ ತಪ್ಪನ್ನ ಮತ್ತೊಬ್ಬರ ಮೇಲೆ ಹೊರೆಸುವ ನಿಸ್ಸೀಮ ರಾಜಕಾರಣಿ ಅದರಲ್ಲೂ ಬಿಜೆಪಿಗೆ ಇಂತಹ ಸುಳ್ಳುಗಾರನೇ ಮಾರ್ಗದರ್ಶಕ ಮಂಡಳಿಯ ಅಧ್ಯಕ್ಷ ಸಿ.ಟಿ ರವಿ ಧಾರ್ಮಿಕ ಹೆಸರಿನಲ್ಲಿ ನಡೆಸಿದ ಅನಾಚಾರಗಳು ಇಂದು ಬಹಿರಂಗವಾಗಿದೆ’ ಎಂದು ಟೀಕಿಸಿದರು.

ಪ್ರತಿಭಟನೆ ವೇಳೆ ಸಿ.ಟಿ ರವಿ ಹೊಟೇಲ್ ಎಂದು ಪ್ರಾರಂಭಿಸಿ ಸಿ.ಟಿ.ರವಿಗೆ ಉಚಿತವಾಗಿ ಮಾಂಸಾಹಾರಿ ಊಟವನ್ನು ವಿತರಿಸಲಾಯಿತು. ಅಲ್ಲದೇ, ಸಿಟಿ ರವಿ ಮಾಂಸಾಹಾರಿ ಊಟ ತಿನ್ನುವ ಬಗ್ಗೆ ಅಣಕು ಪ್ರದರ್ಶನ ಮಾಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಕಾಂಗ್ರೆಸ್ ಪಕ್ಷದ ಮುಖಂಡರಾದ ರವಿಶೇಖರ್, ಎ.ಆನಂದ್, ಬಿ. ಮಂಜುನಾಥ್, ಉಮೇಶ್, ಪುಟ್ಟರಾಜು, ಪ್ರಶಾಂತ, ಅನಿಲ್ ಕುಮಾರ್ ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!