ಮದ್ಯಪಾನದ ವಯೋಮಿತಿ 18ಕ್ಕೆ ಇಳಿಕೆಗೆ ಖಂಡನೆ- ನಿರ್ಣಯ ವಾಪಸ್ಸು ಪಡೆಯುವಂತೆ ಮುತಾಲಿಕ್ ಆಗ್ರಹ

ಉಡುಪಿ ಫೆ.24 (ಉಡುಪಿ ಟೈಮ್ಸ್ ವರದಿ): ಇಡೀ ವ್ಯವಸ್ಥೆಯನ್ನೇ ಹಾಳು ಮಾಡುತ್ತಿರುವ ಮದ್ಯಮಾನ ಸೇವನೆಯ ವಯಸ್ಸನ್ನು 21 ರಿಂದ 18 ವರ್ಷಕ್ಕೆ ಸರಕಾರ ಇಳಿಸಿರುವುದು ಆಘಾತಕಾರಿಯಾಗಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಹೇಳಿದ್ದಾರೆ.

ಈ ಬಗ್ಗೆ ವಿಡಿಯೋ ಮೂಲಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಮದ್ಯಪಾನವನ್ನು ನಿಷೇಧಿಸಬೇಕು ಎಂದು ಮಹಾತ್ಮಾ ಗಾಂಧೀಜಿ ಅವರು 75 ವರ್ಷಗಳ ಹಿಂದೆಯೇ ಹೇಳಿದ್ದರು. ಆದರೂ ಅದನ್ನು ಅನುಸರಿದೇ ಮದ್ಯಪಾನದ ಮೂಲಕ ರಾಜಕಾರಣ ಮಾಡುತ್ತಿರುವುದು ಅತ್ಯಂತ ಅಸಹ್ಯ ಕರವಾದ ಸಂಗತಿ. ಇಂದು ಹಳ್ಳಿ ಹಳ್ಳಿಗಳಲ್ಲಿ ರೈತರು, ಹೆಣ್ಣು ಮಕ್ಕಳು, ವಿದ್ಯಾರ್ಥಿಗಳು ಕಾರ್ಮಿಕರು ಮದ್ಯಪಾನಕ್ಕೆ ಬಲಿಯಾಗುತ್ತಿದ್ದಾರೆ. ಮದ್ಯಪಾನಕ್ಕೆ ಯಾವುದೇ ಹಿಡಿತ ಇಲ್ಲದೆ ಕಡಿಮೆ ಮಾಡುವ ಪ್ರವೃತ್ತಿ ಮಾಡದೆ ಇನ್ನಷ್ಟು ಪ್ರೋತ್ಸಾಹ ಕೊಡುವ ನಿರ್ಣಯ ಸರಕಾರ ತೆಗೆದುಕೊಂಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದರು.

ಒಂದೆಡೆ ಮದ್ಯಪಾನ, ಮಾದಕ ವಸ್ತು ಸೇವನೆಯನ್ನು ಹಿಡಿತಕ್ಕೆ ತರಬೇಕು ಎಂದು ಪ್ರಯತ್ನ ಮಾಡುತ್ತಿರುವ ಹೊತ್ತಿನಲ್ಲಿ 18 ವಯಸ್ಸಿನ ಯುವಕರನ್ನು ಮದ್ಯಪಾನದಲ್ಲಿ ತೊಡಗಿಸುವಂತಹ ಪ್ರಕ್ರಿಯೆ ಸರಿಯಲ್ಲ. ಈ ನಿರ್ಣಯ ವಾಪಸ್ಸು ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಶ್ರೀರಾಮ ಸೇನೆ ಸಂಘಟನೆ ರಾಜ್ಯಾದ್ಯಂತ ಮಹಿಳೆಯರನ್ನು, ದೇವಸ್ಥಾನದ ಧರ್ಮದರ್ಶಿಗಳನ್ನು ಒಳಗೊಂಡು ವಿರೋಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಹಾಗೂ ಸರಕಾರ ಯುವಕರನ್ನು ಮದ್ಯಪಾನಕ್ಕೆ ಇನ್ನಷ್ಟು ಪ್ರೋತ್ಸಾಹ ಕೊಡುವ ಪ್ರಕ್ರಿಯೆ ಮಾಡುತ್ತಿದೆ. ಈ ಮೂಲಕ ಯುವಕರನ್ನು ಹಾಳು ಮಾಡುವ ಪ್ರವೃತ್ತಿ ತೋರುತ್ತಿದೆ. ಇಲ್ಲಿಯ ವರೆಗೆ 21 ವಯಸ್ಸು ಮಿತಿ ಇತ್ತು ಆದರೀಗ 18 ವರ್ಷಕ್ಕೆ ಇಳಿಸಿರುವುದು ಖಂಡನೀಯ, ಇದನ್ನು ವಿರೋಧಿಸಲೇ ಬೇಕು. ಇದನ್ನು ವಾಪಸ್ಸು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಇನ್ನು ಇತ್ತೀಚೆಗೆ ಮದ್ಯಪಾನ ಮುಕ್ತ ವಾತಾವರಣ ನಿರ್ಮಾಣ ಮಾಡಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವಿರೇಂದ್ರ ಹೆಗಡೆ ಅವರು ಹೇಳಿಕೆ ನೀಡಿದ್ದರು ಅವರು ಕೂಡಾ ಇದಕ್ಕೆ ಸ್ಪಂದಿಸಿ, ರಾಜ್ಯ ಸಭೆಯಲ್ಲಿ ಧ್ವನಿ ಎತ್ತಬೇಕು. ಮುಖ್ಯಮಂತ್ರಿ ಯವರಿಗೆ ಈ ನಿರ್ಣಯವನ್ನು ವಾಪಸ್ಸು ತೆಗೆದುಕೊಳ್ಳುವಂತೆ ತಿಳಿಸಬೇಕು ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!