ಮದ್ಯ ಖರೀದಿ, ಮಾರಾಟಕ್ಕೆ ವಯೋಮಿತಿ 21 – 18 ಕ್ಕೆ ಇಳಿಕೆ ಮಾಡಲು ಕರಡು ಅಧಿಸೂಚನೆ ?
ಬೆಂಗಳೂರು ಫೆ.24 : ಮದ್ಯ ಖರೀದಿ ವಯಸ್ಸು 18ಕ್ಕೆ ಇಳಿಕೆ ಮಾಡುವ ಪ್ರಸ್ತಾಪಕ್ಕೆ ಆಕ್ಷೇಪಣೆ ಸಲ್ಲಿಕೆ ಅವಧಿಯೂ ಪೂರ್ಣಗೊಂಡಿದ್ದು, ಮದ್ಯ ಖರೀದಿ ಮತ್ತು ಮಾರಾಟಕ್ಕೆ ನಿಗದಿಪಡಿಸಿದ್ದ 21 ವರ್ಷಗಳ ವಯೋಮಿತಿಯನ್ನು ಸಡಿಲಿಸಿ 18 ವರ್ಷಕ್ಕೆ ಇಳಿಕೆ ಮಾಡಲು ಕರಡು ಅಧಿಸೂಚನೆ ಹೊರಡಿಸಲಾಗಿದೆ.
ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಗೋವಿಂದರಾಜು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಬಕಾರಿ ಸಚಿವ ಕೆ. ಗೋಪಾಲಯ್ಯ ಅವರು, ಮದ್ಯ ಮಾರಾಟ ಮತ್ತು ಖರೀದಿಯ ವಯೋಮಿತಿ ಸಡಿಲಿಕೆ ಸಂಬಂಧ 2023ರ ಜ.9ರಂದು ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಆಕ್ಷೇಪಣೆ ಮತ್ತು ಸಲಹೆಗಳಿಗೆ 30 ದಿನ ಕಾಲಾವಕಾಶ ನೀಡಲಾಗಿದೆ ಎಂದರು. ವಿಶೇಷವೆಂದರೆ, ಈಗಾಗಲೇ 30 ದಿನಗಳ ಅವಧಿ ಮುಗಿದಿದೆ ಎಂಬ ತಿಳಿಸಿದ್ದಾರೆ.
ಅಬಕಾರಿ ಕಾಯ್ದೆ-1965ರ ಕಲಂ 36 (1) (ಜೆ) ಪ್ರಕಾರ 18 ವರ್ಷದೊಳಗಿನವರು ಮದ್ಯ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ. ಅದೇ ರೀತಿ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು-1967ರ ನಿಯಮ 10(1) (ಇ)ರಲ್ಲಿ 21 ವರ್ಷದೊಳಗಿನ ವ್ಯಕ್ತಿ ಮದ್ಯ ಮಾರಾಟ ಮಾಡಬಾರದು ಎಂದು ಹೇಳಲಾಗಿದೆ. ಅಬಕಾರಿ ಇಲಾಖೆಯ ವಿವಿಧ ಕಾರ್ಯಕ್ಷಮಗಳ ಬಗ್ಗೆ ಪರಿಶೀಲಿಸಲು ಹಾಗೂ ಕರ್ನಾಟಕ ಅಬಕಾರಿ ಕಾಯ್ದೆ-1965 ಮತ್ತು ಅದರಡಿ ರಚಿಸಲಾಗಿರುವ ನಿಯಮಗಳಲ್ಲಿರುವ ಅಪ್ರಸ್ತುತ ಅಂಶಗಳನ್ನು ಗುರುತಿಸಿ ಕೈಬಿಡಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ತಿಳಿದು ಬಂದಿದೆ.