“ನೃಪತುಂಗ ಸಾಹಿತ್ಯ ಪ್ರಶಸ್ತಿ”ಗೆ ಲೇಖಕಿ ವೈದೇಹಿ ಆಯ್ಕೆ
ಬೆಂಗಳೂರು ಫೆ.24 : ನಾಡಿನ ಪ್ರಸಿದ್ಧ ಲೇಖಕಿ ವೈದೇಹಿ ಅವರು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಹಯೋಗದಲ್ಲಿ ನೀಡುವ ಪ್ರತಿಷ್ಠಿತ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆ ಯಾಗಿದ್ದಾರೆ.
ಈ ಬಗ್ಗೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರು ಮಾಹಿತಿ ನೀಡಿ, ಸಾಹಿತ್ಯ ಲೋಕದಲ್ಲಿನ ಇವರ ಜೀವಮಾನದ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿ ಯು 7 ಲಕ್ಷ ನಗದು ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದ್ದು, ಕರ್ನಾಟಕದಲ್ಲೇ ಅತೀ ಹೆಚ್ಚು ನಗದು ಮೊತ್ತ ಒಳಗೊಂಡ ಪ್ರಶಸ್ತಿ ಇದಾಗಿದೆ. ನೃಪತುಂಗ ಪ್ರಶಸ್ತಿಗೆ ಆಯ್ಕೆಯಾದ ಎರಡನೇ ಮಹಿಳಾ ಸಾಹಿತಿ ವೈದೇಹಿ ಆಗಿದ್ದಾರೆ. 2012ರಲ್ಲಿ ಈ ಪ್ರಶಸ್ತಿಗೆ ಲೇಖಕಿ ಸಾರಾ ಅಬೂಬಕರ್ ಆಯ್ಕೆಯಾಗಿದ್ದರು ಎಂದು ತಿಳಿಸಿದ್ದಾರೆ.
ಇನ್ನು ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಗೆ ಗದಗ ಜಿಲ್ಲೆಯ ಗಜೇಂದ್ರಗಡದ ಹನುಮಂತ ಸೋಮನಕಟ್ಟಿ, ವಿಜಯನಗರ ಜಿಲ್ಲೆಯ ಕೊಟ್ಟೂರಿನ ಗುಡ್ಡಪ್ಪ ಬೆಟಗೇರಿ, ತುಮಕೂರು ಜಿಲ್ಲೆಯ ಸತ್ಯಮಂಗಲ ಮಹಾದೇವ, ಕಾಸರಗೋಡಿನ ವಿದ್ಯಾರಶ್ಮಿ ಪೆಲ್ಲತ್ತಡ್ಕ, ಹಾಸನ ಜಿಲ್ಲೆಯ ಬೇಲೂರು ರಘುನಂದನ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ 25 ಸಾವಿರ ನಗದು ಒಳಗೊಂಡಿದೆ. 45 ವರ್ಷದೊಳಗಿನ ಪ್ರತಿಭಾವಂತ ಸಾಧಕರಿಗೆ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ
ವೈದೇಹಿ ಎಂಬ ಕಾವ್ಯನಾಮದಿಂದ ಖ್ಯಾತರಾಗಿರುವ ಜಾನಕಿ ಶ್ರೀನಿವಾಸಮೂರ್ತಿ, ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ಸಣ್ಣಕತೆ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ವೈದೇಹಿ ಅವರ ಬರವಣಿಗೆಯನ್ನು ಕಾಣಬಹುದಾಗಿದೆ.