ಕಾರ್ಮಿಕರ ಕೆಲಸದ ಅವಧಿ 12 ಗಂಟೆಗೆ ಹೆಚ್ಚಳ : ವಿಧಾನಸಭೆ ಅಸ್ತು

ಬೆಂಗಳೂರು ಫೆ.23 : ರಾಜ್ಯದ ಕಾರ್ಖಾನೆಗಳಲ್ಲಿ ಕೆಲಸ ಅವಧಿಯನ್ನು 9ಗಂಟೆಯಿಂದ 12ಗಂಟೆಗಳ ವರೆಗೆ ಹೆಚ್ಚಿಸಲು ಮತ್ತು ಆಸಕ್ತಿ ಇರುವ ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸುವ ಮಹತ್ವದ ‘ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ-2023’ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಗಿದೆ.

‘ಹೊಸ ಕಾಯ್ದೆ ಜಾರಿಗೆ ಬಂದ ನಂತರ ವಾರದಲ್ಲಿ ಗರಿಷ್ಠ 48 ಗಂಟೆಗಳ ಕೆಲಸ. ವಿರಾಮ, ಮಧ್ಯಂತರಗಳನ್ನು ಒಳಗೊಂಡಂತೆ ಕೆಲಸದ ಅವಧಿ(ದೈನಂದಿನ ಗರಿಷ್ಠ) 9 ಗಂಟೆಯಿಂದ 12 ಗಂಟೆಗೆ ಹೆಚ್ಚಲಿದೆ. ಇದಕ್ಕೆ ಕೆಲಸಗಾರನ ಲಿಖಿತ ಒಪ್ಪಿಗೆಯ ಅಗತ್ಯವಿದ್ದು, ಆಗ ಮಾತ್ರ ಕೆಲಸದ ಅವಧಿ 12 ಗಂಟೆಗಳಿಗೆ ವಿಸ್ತರಿಸಬಹುದು’ ಎಂದು ಉಲ್ಲೇಖಿಸಲಾಗಿದೆ.

‘ಒಬ್ಬ ಕಾರ್ಮಿಕ ದಿನಕ್ಕೆ 12 ಗಂಟೆಗಳಂತೆ ವಾರದಲ್ಲಿ ಒಟ್ಟು 48 ಗಂಟೆ ಕೆಲಸ ಮಾಡಿದರೆ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡಿದಂತೆ ಆಗುತ್ತದೆ. ಉಳಿದ ದಿನಗಳನ್ನು ಪಾವತಿ ರಜಾ ದಿನಗಳನ್ನಾಗಿ ಪರಿಗಣಿಸಬೇಕಾಗುತ್ತದೆ. ಕಾರ್ಮಿಕನಿಗೆ ವಾರದ ಉಳಿದ ದಿನಗಳು ಪಾವತಿ ರಜಾ ದಿನಗಳಾಗಿ ಪರಿಗಣಿಸಲಾಗುವುದು’ ಎಂದು ತಿಳಿಸಲಾಗಿದೆ.

ಕಾರ್ಖಾನೆಗಳಲ್ಲಿ ಸದ್ಯ 9 ಗಂಟೆ ಮಾತ್ರ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ, ಮಹಿಳಾ ಕಾರ್ಮಿಕರನ್ನು ನಿಗದಿತ ಅವಧಿಯವರೆಗೆ ಮಾತ್ರವೇ ಕೆಲಸ ಮಾಡಿಸಲು ಅವಕಾಶವಿತ್ತು. ಆದರೆ, ಇದೀಗ ನೂತನ ವಿಧೇಯಕ ಜಾರಿಗೆ ಬಂದರೆ ದಿನದ 24 ಗಂಟೆಯ ಅವಧಿಯಲ್ಲಿ ಮಹಿಳಾ ಕಾರ್ಮಿಕರ ಒಪ್ಪಿಗೆ ಇದ್ದರೆ ಯಾವ ಹೊತ್ತಿನಲ್ಲಾದರೂ ಕೆಲಸ ಮಾಡಲು ಅನುಮತಿ ದೊರೆಯಲಿದೆ. ಇದರ ಜೊತೆಗೆ ವಾರದಲ್ಲಿ ಐದು ದಿನಗಳು ಕೆಲಸ ಮಾಡುವ ವೇಳೆ ಯಾವುದೇ ದಿನದಲ್ಲಿ 10 ಗಂಟೆಗಳಿಗಿಂತ ಹೆಚ್ಚು ಅಥವಾ ಯಾವುದೇ ವಾರದಲ್ಲಿ 48 ಗಂಟೆಗಳಿಂತ ಹೆಚ್ಚು ಕೆಲಸ ಮಾಡಿದರೆ, ಯಾವುದೇ ವಾರದಲ್ಲಿ ನಾಲ್ಕು ದಿನಗಳು ಕೆಲಸ ಮಾಡುವಾಗ ಅಥವಾ ಪಾವತಿ ರಜಾ ದಿನಗಳಲ್ಲಿ ಕೆಲಸ ಮಾಡುವಾಗ ಹನ್ನೊಂದುವರೆ ಗಂಟೆಗಳಿಗಿಂತ ಹೆಚ್ಚಾದಲ್ಲಿ ಕಾರ್ಮಿಕರಿಗೆ ‘ದುಪ್ಪಟ್ಟು ಮಜೂರಿ’ಗೆ ಅರ್ಹನಾಗುತ್ತಾನೆ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.

ಹಾಗೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಮಹಿಳಾ ಕಾರ್ಮಿಕರಿಂದ ಲಿಖಿತ ಒಪ್ಪಿಗೆ ಪಡೆದು ಅವಕಾಶ ನೀಡಬಹುದಾಗಿದೆ. ಅವಧಿ ಮೀರಿ ಕೆಲಸಕ್ಕಾಗಿ (ಓವರ್ ಟೈಮ್) ಮಹಿಳಾ ಕೆಲಸಗಾರರಿಗೆ ಅನುವು ಮಾಡಿಕೊಡಬೇಕು. ಜೊತೆಗೆ ಕೆಲಸ ಮಾಡುವ ಮಹಿಳಾ ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಮಾತ್ರವಲ್ಲ, ರಾತ್ರಿ ಪಾಳಿಯಲ್ಲಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಮಹಿಳಾ ಭದ್ರತೆಯನ್ನು ಕಲ್ಪಿಸಬೇಕು. ಹಾಗೂ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುವಂತೆ ಯಾವೊಬ್ಬ ಮಹಿಳಾ ನೌಕರರಿಗೆ ಕಡ್ಡಾಯ ಅಥವಾ ಕಟ್ಟುಪಾಡು ಮಾಡತಕ್ಕದ್ದಲ್ಲ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಮಹಿಳಾ ನೌಕರರಿಂದ ಲಿಖಿತ ಸಮ್ಮತಿ ಪಡೆಯತಕ್ಕದ್ದು. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಕೃತ್ಯ ಎಸಗುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಧೇಯಕದಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!