ಗೋವಾಕ್ಕೆ ಗೋ ಮಾಂಸ ರಫ್ತು ಒಪ್ಪಿಕೊಂಡ ರಾಜ್ಯ ಸರಕಾರ- ಅಂಕಿ ಅಂಶ ಮಾತ್ರ ಇಲ್ಲ!!
ಬೆಂಗಳೂರು, ಫೆ.23 : ರಾಜ್ಯದಿಂದ ಗೋವಾಕ್ಕೆ ಜಾನುವಾರುಗಳ ಮಾಂಸ ಕಳುಹಿಸಲಾಗುತ್ತಿದೆ ಎಂದು ರಾಜ್ಯ ಸರಕಾರ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ.
ವಿಧಾನ ಪರಿಷತ್ ನಲ್ಲಿ ಸದಸ್ಯ ಹರೀಶ್ ಕುಮಾರ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಭು ಚವ್ಹಾಣ್ ಅವರು, ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆಯಲ್ಲಿ ಜಾನುವಾರು ಮಾಂಸ ರಫ್ತು ಮಾಡುವ ಅಂಕಿ ಅಂಶ ಮಾಹಿತಿಗಳನ್ನು ನಿರ್ವಹಣೆ ಮಾಡುವುದಿಲ್ಲ. ಆದಾಗ್ಯೂ ನಗರಾಭಿವೃದ್ಧಿ, ವಾಣಿಜ್ಯ ಮತ್ತು ಕೈಗಾರಿಕ, ಆರ್ಥಿಕ ಇಲಾಖೆಗಳಿಂದ ಮಾಹಿತಿ ಕೋರಲಾಗಿತ್ತು. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಲ್ಲಿ ಗೋವಾಕ್ಕೆ ಮಾಂಸ ಕಳುಹಿಸುತ್ತಿರುವ ಬಗ್ಗೆ ಮಾಹಿತಿ ಇದೆ. ಆದರೆ ರಫ್ತಿಗೆ ಸಂಬಂಧಪಟ್ಟ ವಿವರಗಳಿಲ್ಲ. ದನ ಮತ್ತು ಎಮ್ಮೆ ಮಾಂಸ ರಫ್ತು ಮಾಹಿತಿ ಶೂನ್ಯ ಎಂದು ಆರ್ಥಿಕ ಇಲಾಖೆ ವರದಿ ನೀಡಿದೆ ಎಂದು ತಿಳಿಸಿದರು.
ಈ ವೇಳೆ ಸದಸ್ಯ ಹರೀಶ್ ಕುಮಾರ್ ಅವರು, ಉತ್ತರ ನೀಡಿದ ಆರ್ಥಿಕ ಇಲಾಖೆಗೆ ಬಹುಮಾನ ನೀಡಬೇಕು ಎಂದು ವ್ಯಂಗ್ಯವಾಡಿದರು.
ಗೋವಾ ವಿಧಾನಸಭೆಯಲ್ಲಿ ಪ್ರತಿದಿನ 2 ಟನ್ ಮಾಂಸ ಪೂರೈಕೆಯಾಗುತ್ತಿದೆ ಎಂದು ಅಲ್ಲಿನ ಸದಸ್ಯರು ತಿಳಿಸಿದ್ದಾರೆ. ಹಾಗೂ ಆ ಮಾಂಸ ಗಡಿ ಜಿಲ್ಲೆ ಬೆಳಗಾವಿಯಿಂದಲೇ ಸರಬರಾಜಾಗುತ್ತಿದೆ. ಸರ್ಕಾರ ಉದ್ದೇಶಪೂರ್ವಕವಾಗಿ ಮಾಹಿತಿ ಮುಚ್ಚಿಡುತ್ತಿದೆ ಎಂದು ಆಕ್ಷೇಪಿಸಿದರು.
ಇದೇ ವೇಳೆ ರಾಜ್ಯದಲ್ಲಿ ಗೋಹತ್ಯೆ ನಿಷೇಧವಾಗಿದ್ದರೂ ನೆರೆ ರಾಜ್ಯಕ್ಕೆ ಮಾಂಸ ರವಾನೆಯಾಗುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗೋಹತ್ಯೆ ನಿಷೇಧವಾದ ಬಳಿಕ ನಾವು ಎಸ್‍ಪಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿ, ರಾಜ್ಯಾದ್ಯಂತ 1329 ಗೋ ಸಾಗಾಣಿಕೆ ಪ್ರಕರಣಗಳನ್ನು ದಾಖಲಿಸಿದ್ದು, 10 ಸಾವಿರ ಹಸುಗಳನ್ನು ರಕ್ಷಣೆ ಮಾಡಿದ್ದೇವೆ. ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗಿದೆ ಎಂದರು.