ಕಾಪು: ವಿವಿಧ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ

ಕಾಪು(ಉಡುಪಿ ಟೈಮ್ಸ್ ವರದಿ): ಕೇಂದ್ರ ಮತ್ತು ರಾಜ್ಯ ಸರಕಾರದ ಬೆಲೆಯೇರಿಕೆ ನೀತಿ, ಕೃಷಿ ಕಾಯ್ದೆ ಹೀಗೆ ವಿವಿಧ ಜನ ವಿರೋಧಿ ನೀತಿಯನ್ನು ಖಂಡಿಸಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ಇದರ ನೇತೃತ್ವದಲ್ಲಿ ಕಾಪು ಪೇಟೆಯಲ್ಲಿ ಇಂದು( ಜ.2) ಬೃಹತ್ ಪ್ರತಿಭಟನಾ ಸಭೆ ನಡೆಸಲಾಯಿತು. ಪ್ರತಿಭಟನಾ ಸಭೆಗೂ ಮುನ್ನ ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನ ಬಳಿಯಿಂದ ಕಾಪು ಪೇಟೆಯವರೆಗೆ ಕಾಲ್ನಡಿಗೆ ಜಾಥಾ ನಡೆಸಿದ ಪ್ರತಿಭಟನಾಕಾರರು, ಬಳಿಕ ಕಾಪು ಪೇಟೆಯಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿದರು.

ನಂತರ ರಾಜ್ಯಪಾಲರು, ಮುಖ್ಯಮಂತ್ರಿ, ಕೇಂದ್ರ ಸಚಿವರು ಮತ್ತು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ನಡುವೆ ಸಭೆಯಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಮಾತನಾಡಿ, ರೈತರಿಗೆ, ಕಾರ್ಮಿಕರಿಗೆ ಸಮಸ್ಯೆಯನ್ನುಂಟು ಮಾಡುವ ನೂತನ ಕಾಯ್ದೆಗಳನ್ನು ಸರಕಕಾರ ಜಾರಿಗೆ ತಂದು ರೈತರ, ಕಾರ್ಮಿಕರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿವೆ. ಬಡಪಾಯಿ ಬೀಡಿ ಕಾರ್ಮಿಕರ ಜೀವನಕ್ಕೆ ಮಾರಕವಾಗಲಿರುವ ಕಾಯ್ದೆಯನ್ನು ತರುವ ಮೂಲಕ ಬೀಡಿ ಕಾರ್ಮಿಕರ ಬದುಕಿಗೆ ಕೊಡಲಿಯೇಟು ನೀಡಲು ಹೊರಟಿದೆ. ಆದ್ದರಿಂದ ಸರಕಾರಗಳ ವಿರುದ್ದದ ಹೋರಾಟಕ್ಕೆ ಸಾರ್ವಜನಿಕರೂ ಕೈ ಜೋಡಿಸುವ ಅಗತ್ಯತೆ ಇದೆ ಎಂದು ಕರೆ ನೀಡಿದರು.

ಈ ಸಂದರ್ಬ ಸಿಐಟಿಯು ರಾಜ್ಯ ಪ್ರತಿನಿಧಿ ಕವಿರಾಜ್, ಸಿಐಟಿಯು ಜಿಲ್ಲಾಧ್ಯಕ್ಷ ಮಹಾಬಲ ವಡೇರ ಹೋಬಳಿ, ಬೀಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೃಷ್ಣ ರೈ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕೆಪಿಸಿಸಿ ಸಂಯೋಜಕ ನವೀನ್ ಚಂದ್ರ ಶೆಟ್ಟಿ, ಕಾಂಗ್ರೆಸ್ ರಾಜ್ಯ ಹಿಂದುಳಿದ ವರ್ಗಗಳ ಘಟಕದ ಕಾರ್ಯದರ್ಶಿ ಶಿವಾಜಿ ಸುವರ್ಣ, ಪುರಸಭೆ ಉಪಾಧ್ಯಕ್ಷೆ ಮಾಲಿನಿ, ಹರೀಶ್ ಶೆಟ್ಟಿ ಪಾಂಗಾಳ, ಜಿ.ಪಂ. ಮಾಜಿ ಅಧ್ಯಕ್ಷೆ ಸರಸು ಡಿ. ಬಂಗೇರ, ಕಾಂಗ್ರೆಸ್ ಮುಖಂಡರಾದ ನವೀನ್ ಎನ್. ಶೆಟ್ಟಿ, ವೈ. ಸುಕುಮಾರ್, ಸುಧೀರ್ ಕುಮಾರ್,  ರಮೀಜ್ ಹುಸೈನ್, ಅಮೀರ್ ಮಹಮ್ಮದ್, ಪ್ರಭಾ ಬಿ. ಶೆಟ್ಟಿ, ದೀಪಕ್ ಕುಮಾರ್ ಎರ್ಮಾಳ್, ಸೌರಭ್ ಬಲ್ಲಾಳ್, ಕೀರ್ತಿ ಶೆಟ್ಟಿ, ಹರೀಶ್ ನಾಯಕ್, ಅಖಿಲೇಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!