ಪ್ರತಿ ತಿಂಗಳು ಸಪ್ತಪದಿ ಸಾಮೂಹಿಕ ವಿವಾಹ ನಡೆಸಲು ನಿರ್ಧಾರ: ಕೋಟ

ಉಡುಪಿ(ಉಡುಪಿ ಟೈಮ್ಸ್ ವರದಿ): ಜನ ಸಾಮಾನ್ಯರಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಿರಂತರವಾಗಿ ಪ್ರತಿ ತಿಂಗಳಲ್ಲಿ ಒಂದು ದಿನವನ್ನು ನಿಗದಿಪಡಿಸಿಕೊಂಡು ನಡೆಸುವಂತೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಪ್ರಮುಖ ದೇವಾಲಯಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಲಾಗಿದೆ.

ಜನವರಿ ಮತ್ತು ಫೆಬ್ರವರಿ-2021ರ ಮಾಹೆಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸುತ್ತೋಲೆಯನ್ವಯ ದಿನಾಂಕಗಳನ್ನು ನಿಗದಿಪಡಿಸಲಾಗಿದ್ದು, ಇದರೊಂದಿಗೆ, ಮಾರ್ಚ್ ನಿಂದ ಜುಲೈ ವರೆಗೆ ಸಾಮೂಹಿಕ ವಿವಾಹವನ್ನು ನಡೆಸುವ ಬಗ್ಗೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಜೊತೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ನೊಂದಾಯಿಸಿಕೊಳ್ಳುವ ವಧು-ವರರಿಗೆ ಗೊತ್ತು ಪಡಿಸಿದ ದಿನಾಂಕಗಳಲ್ಲಿ ವಿವಾಹಗಳನ್ನು ನಡೆಸುವ ಬಗ್ಗೆ ಸೂಕ್ತ ಆದೇಶ ಹೊರಡಿಸಲು ಸಚಿವರು ಸೂಚಿಸಿದ್ದಾರೆ.

ಸಚಿವರ ಸೂಚನೆಯ ಮೇರೆಗೆ, ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ 10 ಅಧಿಸೂಚಿತ ದೇವಾಲಯಗಳಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸಲು ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಈ ಮಾರ್ಗಸೂಚಿಗಳು ಹಾಗೂ ಷರತ್ತುಗಳಲ್ಲಿ ಬದಲಾವಣೆ ಮತ್ತು ಸೇರ್ಪಡೆಗಳೊಂದಿಗೆ ಇಲಾಖಾ ಅಧಿಸೂಚಿತ ದೇವಾಲಯಗಳಲ್ಲಿ ಪ್ರತಿ ತಿಂಗಳಲ್ಲಿ ನಿರಂತರವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸಲು ಸುತ್ತೋಲೆ ಹೊರಡಿಸಿದೆ.

ಅದರಂತೆ ದೇವಸ್ಥಾನಗಳಲ್ಲಿ ಸರಳ ವಿವಾಹ ನಡೆಸಲು ಈ ಷರತ್ತುಗಳನ್ನು ಹೊರಡಿಸಲಾಗಿದೆ.

1) ಆಗಮ ಪಂಡಿತರು ನೀಡಿರುವ ದಿನಾಂಕದಲ್ಲಿ ಕಾರ್ಯಕ್ರಮ ರೂಪಿಸಲು ಸಾಧ್ಯವಾಗದಿದ್ದಲ್ಲಿ ಬೇರೊಂದು ಸೂಕ್ತ ದಿನಾಂಕವನ್ನು ಜಿಲ್ಲಾ ಧಾರ್ಮಿಕ ಪರಿಷತ್ತಿನ ಆಗಮ ಪಂಡಿತರು ಬಯಸಿದಲ್ಲಿ ಜಿಲ್ಲಾಡಳಿತದ ವತಿಯಿಂದ ಸೂಕ್ತ ದಿನಾಂಕ ಮತ್ತು ಮೂಹೂರ್ತಗಳನ್ನು ನಿಗದಿಪಡಿಸಿಕೊಂಡು ಕಾರ್ಯಕ್ರಮ ರೂಪಿಸುವುದು

2) ವರ್ಷದ ಪ್ರತಿ ತಿಂಗಳು 1ನೇ ತಾರಿಕಿನಿಂದ ತಿಂಗಳ ಕೊನೆಯ ದಿನಾಂಕದವರೆಗೆ ನೋಂದಣಿ ಆದವರನ್ನು ಮುಂದಿನ ತಿಂಗಳ ಮೂಹೂರ್ತ ದಿನಾಂಕಗಳಲ್ಲಿ ಯಾವುದಾದರೂ ಒಂದು ದಿನಾಂಕದಂದು ಸಾಮೂಹಿಕ ವಿವಾಹ ನಡೆಸತಕ್ಕದ್ದು.

3) ಸಪ್ತಪದಿ ಸಾಮೂಹಿಕ ವಿವಾಹಕ್ಕೆ ನೋಂದಾಯಿಸಿಕೊಂಡು ವಿವಾಹವಾಗಲು ಇಚ್ಚಿಸುವ ವಧು-ವರರ ವಿವಾಹಗಳನ್ನು ಸಂಬಂಧಪಟ್ಟ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಆಡಳಿತ ಅಧಿಕರಿಗಳು, ಅನುವಂಶಿಕ ಮೊಕ್ತೇಸರರು, ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಧಾರ್ಮಿಕ ಪರಿಷತ್ತಿನ ಅಧ್ಯಕ್ಷರ ಅನುಮತಿ ಪಡೆದು ಕೋವಿಡ್-19 ನಿಬಂಧನೆಗಳನ್ನು ಅನುಸರಿಸಿಕೊಂಡು ಅನುಕೂಲವಾಗುವ ದಿನಾಂಕಗಳಂದು ಸಾಮೂಹಿಕ ವಿವಾಹಗಳನ್ನು ನಡೆಸಲು ನಿಗದಿ ಪಡಿಸುವುದು.
ಸುತ್ತೋಲೆಯಲ್ಲಿ ಸೂಚಿಸಿರುವ ಈ ಎಲ್ಲಾ ಷರತ್ತುಗಳನ್ನು ಅನುಸರಿಸಿಕೊಂಡು ಸೂಚಿಸಿರುವ ದಿನಾಂಕದoದು ವಿವಾಹ ನಡೆಸ ಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!