ಆರ್.ಇ.ಟಿ ಮೂಲಕ ಉಚಿತ ಪ್ರವೇಶಾತಿ ಬಗ್ಗೆ ಮಾಹಿತಿ ಇಲ್ಲಿದೆ
ಬೆಂಗಳೂರು ಫೆ.21: ಶಿಕ್ಷಣ ಹಕ್ಕು ಕಾಯ್ದೆಯ (RTE Admission 2023-24) ಮೂಲಕ ಉಚಿತವಾಗಿ ಪ್ರವೇಶಕ್ಕೆ ಅರ್ಜಿ ಹಾಕಲು ದಿನಾಂಕವನ್ನು ನಿಗದಿಪಡಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, 2023-24ನೇ ಸಾಲಿನ ಪ್ರವೇಶಾತಿಗೆ ಮಾ.20 ರಿಂದ ಎ.20 ರ ವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಆರ್.ಇ.ಟಿ ಮೂಲಕ ಪ್ರವೇಶಕ್ಕೆ ಅರ್ಜಿ ಹಾಕಲು ಪಾಲಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಗಳಲ್ಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಲ್ಲಿ ಉಚಿತವಾಗಿ ಅಥವಾ ಸರ್ಕಾರದ ಪಾವತಿ ಕೇಂದ್ರಗಳಾದ ಬೆಂಗಳೂರು ನಗರದಲ್ಲಿ, ಬೆಂಗಳೂರು-ಒನ್, ಇತರೆ ನಗರ ಪ್ರದೇಶಗಳಲ್ಲಿ ಕರ್ನಾಟಕ-ಒನ್, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಅಟಲ್-ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಇದಕ್ಕಾಗಿ ಪ್ರವೇಶ ಕೋರುವ ಮಗು ಮತ್ತು ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ದೃಢೀಕರಣ ಪ್ರಮಾಣ ಪತ್ರ ಅಗತ್ಯವಾಗಿ ಬೇಕಾಗುತ್ತದೆ.
ಅನುದಾನಿತ ಶಾಲೆಗಳೂ ಸೇರಿದಂತೆ ದಾಖಲಾತಿ ಕೋರಿ ಪೋಷಕರು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ ಮಾ.20 ಆಗಿದ್ದು ಎ.20 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಮಾ.21 ರಿಂದ ಎ.21 ರ ವರೆಗೆ EID ಮೂಲಕ ಸಲ್ಲಿಸಿದ ಅರ್ಜಿಗಳ ದತ್ತಾಂಶದ ನೈಜತೆ ಪರಿಶೀಲನೆ ಹಾಗೂ ವಿಶೇಷ ಪ್ರವರ್ಗಗಳು ಮತ್ತು ಕ್ರಮಬದ್ಧವಲ್ಲದ ಅರ್ಜಿಗಳ ಪರಿಶೀಲನೆ ನಡೆಯಲಿದೆ.
ಎ.24 ರಂದು ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ ನೀಡಲಾಗತ್ತದೆ. ಎ.27 ರಂದು ಆನ್ಲೈನ್ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ನಡೆಯಲಿದ್ದು, ಎ.28 ರಿಂದ ಮೇ.8ರ ವರೆಗೆ ಶಾಲೆಗಳಲ್ಲಿ ದಾಖಲಾತಿ ಪ್ರಾರಂಭವಾಗಲಿದೆ. ಹಾಗೂ ಇದೇ ಅವಧಿಯಲ್ಲಿ ಶಾಲೆಗಳಲ್ಲಿ ದಾಖಲಾದ ಮೊದಲ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಶದಲ್ಲಿ ಅಪ್ಲೋಡ್ ಮಾಡುವುದು.
ಮೇ.16 ರಿಂದ ಆನ್ಲೈನ್ ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆಯಾಗಲಿದ್ದು, ಮೇ.17 ರಿಂದ 25 ರ ವರೆಗೆ ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಶಾಲೆಗಳಲ್ಲಿ ದಾಖಲಾತಿ ನಡೆಯಲಿದೆ. ಈ ಅವಧಿಯಲ್ಲಿಯೇ ಶಾಲೆಗಳಲ್ಲಿ ದಾಖಲಾದ ಎರಡನೇ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಶದಲ್ಲಿ ಅಪ್ಲೋಡ್ ಮಾಡುವುದು. ಹಾಗೂ ಆನ್ ಲೈನ್ ಮೂಲಕ ಸಲ್ಲಿಸಿದ ಅರ್ಜಿಯಿಂದ ನೈಜತೆ ತಾಳೆ ಆಗದ ಅಪೂರ್ಣ ಅಥವಾ ಕ್ರಮಬದ್ಧವಲ್ಲದ ಅರ್ಜಿಗಳ ದೋಷಗಳನ್ನು ಸರಿಪಡಿಸಲು ತಂದೆ/ತಾಯಿ ಅಥವಾ ಪೋಷಕರ ಮೊಬೈಲಿಗೆ ಎಸ್.ಎಂ.ಎಸ್ ಕಳುಹಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪೋಷಕರು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ವೆಬ್ಸೈಟ್ https://www.schooleducation.kar.nic.in ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.