ಇಂದು ರಾಜ್ಯ ಬಜೆಟ್-ಸಿಎಂ ಲೆಕ್ಕಾಚಾರ ಹೇಗಿದೆ?

ಬೆಂಗಳೂರು ಫೆ.17: ಕುವೆಂಪು ಕವನದ ಸಾಲು ಓದುತ್ತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಎರಡನೇ ಬಾರಿಗೆ ಬಜೆಟ್ ಮಂಡನೆ ಮಾಡಿದ್ದಾರೆ.

ಬೆಳಿಗ್ಗೆ 10.15 ಕ್ಕೆ ಬಜೆಟ್ ಮಂಡಿಸಲು ಆರಂಭಿಸಿದ ಅವರು ಆರಂಭದಲ್ಲಿ ಮುಂದಿನ 25 ವರ್ಷಗಳ ಅಮೃತ ಕಾಲದ ಗುರಿಯೊಂದಿಗೆ ಬಜೆಟ್ ಮಂಡಿಸುತ್ತಿದ್ದೇನೆ ಎಂದರು. ಹಾಗೂ ಶಿಕ್ಷಣ, ಉದ್ಯೋಗ, ಸಬಲೀಕರಣ ಮಂತ್ರದೊಂದಿಗೆ, ದುರ್ಬಲ ವರ್ಗದವರಿಗೆ, ಎಸ್‍ಸಿ,ಎಸ್‍ಟಿಗೆ ಬೆಂಬಲ ನೀಡಿದ್ದೇವೆ. ಉದ್ಯೋಗಾವಕಾಶ, ಅದಕ್ಕೆ ತಕ್ಕಂತೆ ಕೌಶಲಾಭಿವೃದ್ಧಿ ತರಬೇತಿ ನೀಡಿದ್ದೇವೆ. ನಮ್ಮ ಕ್ಲಿನಿಕ್‍ಗಳ ಮೂಲಕ ಆರೋಗ್ಯ ಕ್ಷೇತ್ರದ ಸುಧಾರಣೆಗೂ ಒತ್ತು ನೀಡಿದ್ದೇವೆ. ಜಲಸಾರಿಗೆ ಅವಕಾಶಗಳ ಬಳಕೆ ಸಾಧ್ಯತೆ ಮತ್ತು ಬಂದರು ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಧಾನಿ ಅವರು ಕರೆ ನೀಡಿರುವ ಮುಂದಿನ 25 ವರ್ಷಗಳ ಅಮೃತ ಕಾಲ ಗುರಿಯೊಂದಿಗೆ ಅಭಿವೃದ್ಧಿಪಥದಲ್ಲಿ ನಡೆಯೋಣ ಎಂದರು.

ಬಜೆಟ್ ನಲ್ಲಿ ಕರಾವಳಿಗೆ ಕೊಡುಗೆ ನೀಡಿರುವ ಸಿಎಂ, ಸೀಮೆ ಎಣ್ಣೆ ಆಧಾರಿತ ದೋಣಿಗಳನ್ನು ಪೆಟ್ರೋಲ್ ದೋಣಿಗಳನ್ನಾಗಿ ಪರಿವರ್ತಿಸಲು 40 ಕೋಟಿ ರೂ. ಮೀಸಲಿಡಲಾಗುವುದು. ಪರಿವರ್ತನೆಯಾಗುವ ವರೆಗೂ ಸೀಮೆಎಣ್ಣೆ ಸಹಾಯಧನ ಮುಂದುವರಿಸಲಾಗುವುದು. ಆಳ ಸಮುದ್ರ ಮೀನುಗಾರಿಕೆಗೆ ಮತ್ಸ್ಯಸಿರಿ ಎಂಬ ಯೋಜನೆ ಆರಂಭಿಸಲಾಗಿದೆ. ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆ ಜತೆ ಸಮನ್ವಯಗೊಳಿಸಿ ಈ ಯೋಜನೆ ಜಾರಿಗೊಳಿಸಲಾಗಿದೆ. ಮೀನುಗಾರಿಕೆ ಉತ್ತೇಜನಕ್ಕೆ ಕಾರವಾರದ ಬಳಿ ಸೀ ಫುಡ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಬಜೆಟ್ ನಲ್ಲಿ ಘೋಷಣೆ ಮಾಡಿದರು.

ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರ ಕುಟುಂಬಗಳಿಗೆ 180 ಕೋಟಿ ರೂ. ವೆಚ್ಚದಲ್ಲಿ ಜೀವನ್ ಜ್ಯೋತಿ ವಿಮಾ ಯೋಜನೆ, ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ ಮಾಡಿದ್ದು, ಇದು ಮೀನುಗಾರರು, ಟ್ಯಾಕ್ಸಿ ಆಟೋ ಚಾಲಕರ ಮಕ್ಕಳಿಗೂ ವಿಸ್ತರಣೆಯಾಗಲಿದೆ. ಇದಕ್ಕಾಗಿ ಹೆಚ್ಚುವರಿ 141 ಕೋಟಿ ರೂ. ಅನುದಾನವನ್ನು ಬಜೆಟ್‍ನಲ್ಲಿ ಘೋಷಿಸಲಾಗಿದೆ.

ಮಠ-ಮಂದಿರಗಳ ಅಭಿವೃದ್ಧಿಗೆ ಬಜೆಟ್ ನಲ್ಲಿ 1,000 ಕೋಟಿ ರೂ. ಹಣ ಮೀಸಲಿರಿಸಲಾಗಿದೆ. ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 475 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಕಿತ್ತೂರು ಭಾಗದ ಅಭಿವೃದ್ಧಿಗೆ ಕಿತ್ತೂರು ಕರ್ನಾಟಕ ಮಂಡಳಿ ಸ್ಥಾಪನೆ ಮಾಡಲಾಗುವುದು ಎಂದು ಘೋಷಿಸಲಾಗಿದೆ. ಹಾಗೂ ಗ್ರಾಮ ಪಂಚಾಯಿತಿಗೆ ರಸ್ತೆ ಹಾಗೂ ಮೂಲಸೌಕರ್ಯ ವೃದ್ಧಿಗಾಗಿ 22 ಲಕ್ಷ ರೂ.ನಿಂದ 60 ಲಕ್ಷ ರೂ. ವರೆಗೆ ಅನುದಾನ ನೀಡಲು 780 ಕೋಟಿ ರೂ. ಅನುದಾನ ನೀಡಲಾಗುವುದು.

ಗೃಹಿಣಿ ಶಕ್ತಿ' ಯೋಜನೆ ಜಾರಿ ಮಾಡಿ 45,278 ಕೋಟಿ ಅನುದಾನ ನೀಡಲಾಗುವುದು.ನಮ್ಮ ನೆಲೆ’ ಯೋಜನೆಯಡಿ ಅರ್ಥಿಕವಾಗಿ ದುರ್ಬಲ ವರ್ಗದವರಿಗೆ ನಿವೇಶನ ನೀಡಲಾಗುವುದು.

ಸಹ್ಯಾದ್ರಿ ಸಿರಿ' ಯೋಜನೆ ಅಡಿ ಕರಾವಳಿ, ಮಲೆನಾಡು ಹಾಗೂ ಅರೆ ಮಲೆನಾಡಿನಲ್ಲಿ ನೀರು ಸಂರಕ್ಷಣೆಗೆ ಹಾಗೂ ತೋಟಗಾರಿಕೆ ಉತ್ಪಾದಕತೆ ಹೆಚ್ಚಿಸಲುಒಂದು ತೋಟ ಒಂದು ಬೆಳೆ’ ಯೋಜನೆಗೆ 10 ಕೋಟಿ ರೂ. ಮೀಸಲಿಡಲಾಗುವುದು. ಆಳ ಸಮುದ್ರ ಮೀನುಗಾರಿಕೆ ಉತ್ತೇಜನಕ್ಕೆ `ಮತ್ಸ ಸಿರಿ’ ಯೋಜನೆ ಜಾರಿಗೆ ತರಲಾಗುವುದು.

ಮುಖ್ಯಮಂತ್ರಿ ವಿದ್ಯಾ ಶಕ್ತಿ' ಯೋಜನೆಯಡಿ ಪದವಿವರೆಗೂ ರಾಜ್ಯದ ಎಲ್ಲ ಸರ್ಕಾರಿ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು.ಸಹಸ್ರ ಸರೋವರ’ ಯೋಜನೆ ಅಡಿ ರಾಜ್ಯದ 1,000 ಸಣ್ಣ ಸರೋವರಗಳನ್ನು ಅಭಿವೃದ್ಧಿ ಮಾಡಲಾಗುವುದು. ಬದುಕುವ ದಾರಿ' ಯೋಜನೆಯಡಿ ಯುವಜನರಿಗೆ 3 ತಿಂಗಳು ಐಟಿಐ ತರಬೇತಿ ನೀಡಲಾಗುವುದು. ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲುಯುವಸ್ನೇಹಿ’ ಯೋಜನೆಯಡಿ ಕೆ 2 ಸಾವಿರ ನೀಡಲಾಗುವುದು. 100 ಕೋಟಿ ರೂ. ವೆಚ್ಚದಲ್ಲಿ ಶಾಲೆಗೆ ತೆರಳಲು ಮಕ್ಕಳ ಬಸ್' ಯೋಜನೆ ರೂಪಿಸಲಾಗುವುದು.ಜಲನಿಧಿ’ ಯೋಜನೆಯಡಿ ರೈತರ ಜಮೀನುಗಳಲ್ಲಿ ಜಲ ಹೊಂಡ, ಗೋ ಶಾಲೆಗಳ ನಿರ್ಮಾಣಕ್ಕೆ ಪುಣ್ಯ ಕೋಟೆ ದತ್ತು ಯೋಜನೆ’ ಹಣಕಾಸು ನೆರವು ನಿಡಲಾಗುವುದು. `ಸ್ವಚೇತನ’ ಯೋಜನೆಯಡಿ 5 ಸಾವಿರ ಅಂಗವಿಕಲರಿಗೆ ದ್ವಿಚಕ್ರ ವಾಹನ ನೀಡಬಹುದು.

ಈ ಬಾರಿ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ 5 ಲಕ್ಷ ರೂ. ಸಾಲ. 30 ಲಕ್ಷಕ್ಕಿಂತ ಹೆಚ್ಚು ರೈತರಿಗೆ 25 ಸಾವಿರ ಕೋಟಿ ಸಾಲ, ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಯೋಜನೆ, 2023-24ನೇ ಸಾಲಿನಿಂದ ಹೆಚ್ಚುವರಿಯಾಗಿ 10 ಸಾವಿರ ರೂ. ಸಹಾಯಧನ. ಜೊತೆಗೆ ಭೂಸಿರಿ ಎಂಬ ನೂತನ ಯೋಜನೆ ಅಡಿ 10,000 ರೂ. ಸಹಾಯಧನ ನೀಡಲು ಉದ್ದೇಶಿಸಲಾಗಿದೆ. ರೈತ ಸಿರಿ ಯೋಜನೆಯಡಿಯಲ್ಲಿ ಕಿರುಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟರ್‍ಗೆ 10 ಸಾವಿರ ರೂಪಾಯಿ ಪ್ರೋತ್ಸಾಹಧನ ಘೋಷಣೆ. ಸಹ್ಯಾದ್ರಿ ಯೋಜನೆಯಡಿಯಲ್ಲಿ ಕರಾವಳಿ ಮಲೆನಾಡು ಹಾಗೂ ಅರೆಮಲೆನಾಡು ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ನೀರು ಸಂರಕ್ಷಣೆಗಾಗಿ ಬಾವಿ, ಕಿಂಡಿ ನಾಳ ಅಭಿವೃದ್ಧಿ ಕಾಮಗಾರಿಗೆ 75 ಕೋಟಿ ರೂ. ಅನುದಾನ ಮೀಸಲಿಡಲಾಗುವುದು ಎಂದು ಘೋಷಣೆ ಮಾಡಿದರು.

ಅಡಿಕೆ ಬೆಳೆಯ ರೋಗ ನಿರ್ವಹಣೆಗೆ ನೂತನ ತಂತ್ರಜ್ಞಾನ ಅಭಿವೃದ್ಧಿಗೆ 10 ಲಕ್ಷ ಕೋಟಿ ರೂ. ಅನುದಾನ ಘೋಷಣೆ ಮಾಡಿದ ಸಿಎಂ ದ್ರಾಕ್ಷಿ ಬೆಳೆಗಾರರಿಗೆ 100 ಕೋಟಿ ರೂ. ನೆರವು ಯೋಜನೆ ಆರಂಭಿಸಲಾಗುವುದು. ಜತೆಗೆ, ರೇಷ್ಮೆ ಬೆಳೆ 10 ಸಾವಿರ ಹೆಕ್ಟೇರ್‍ಗೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು. ಗೋ ಸಂಪತ್ತಿನ ರಕ್ಷಣೆಗಾಗಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ, ಗೋಶಾಲೆಗಳ ಸ್ಥಾಪನೆ, ಪುಣ್ಯಕೋಟಿ ದತ್ತು ಯೋಜನೆಯ ಅನುಷ್ಠಾನ ಹಾಗೂ 290 ಸಂಚಾರಿ ಪಶುಚಿಕಿತ್ಸಾಲಯಗಳ ಪ್ರಾರಂಭ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಗಡಿನಾಡು ಪ್ರದೇಶದಲ್ಲಿ ಕನ್ನಡ ಭಾಷೆ, ಕಲೆ, ಶಿಕ್ಷಣ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಪ್ರಾಶಸ್ತ್ರವನ್ನು ನೀಡಲಾಗುವುದು. ಹಾಗೆಯೇ ಗಡಿ ಪ್ರದೇಶದ ರಸ್ತೆಗಳ ಹಾಗೂ ಸಮಗ್ರ ವಿವಿಧ ಇಲಾಖೆಗಳ ಮುಖಾಂತರ 150 ಕೋಟಿ ರೂ. ಒದಗಿಸಲಾಗುವುದು. ಆಶಾಕಾರ್ಯಕರ್ತೆಯರು, ಬಿಸಿಯೂಟ ತಯಾರಿಕರು, ಗ್ರಂಥ ಪಾಲಕರ ಗೌರವಧನ 1000 ರೂ. ಹೆಚ್ಚಳಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕಾಗಿ 775 ಕೋಟಿ ರೂ. ಅನುದಾನ ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕೆ 100 ಕೋಟಿ ವೆಚ್ಚದಲ್ಲಿ ಮಕ್ಕಳ ಬಸ್ ಯೋಜನೆ ಅನುಷ್ಠಾನಗೊಳ್ಳಲಿದ್ದು, 2 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅಭಿವೃದ್ದಿ ಆಕಾಂಕ್ಷಿ ತಾಲೂಕೂಗಳಲ್ಲಿ ಶಿಕ್ಷಣ ಆರೋಗ್ಯ ಮತ್ತು ಪೌಷ್ಟಿಕತೆಗೆ 3000 ಕೋಟಿ ರೂ. ಅನುದಾನ ನೀಡಲಾಗುವುದು. ರಾಜ್ಯದ ಎಲ್ಲಾ ಪ್ರೌಢ ಶಾಲಾ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ದೃಷ್ಟಿಯಿಂದ ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ ಆರಂಭಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

ಜಗಳೂರು ಸೇರಿದಂತೆ ವಿವಿಧ ಕೆರೆಗಳನ್ನು ತುಂಬಿಸಲು ಕ್ರಮ. 69,000 ಬೀದಿ ವ್ಯಾಪಾರಿಗಳಿಗೆ 70 ಕೋಟಿ ಸಾಲ ಮಂಜೂರು. ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 49,031 ಕೋಟಿ ಮೀಸಲು. ಎಸ್.ಸಿ, ಎಸ್.ಟಿ ನಿಗಮಗಳಿಗೆ 795 ಕೋಟಿ ರೂ. ಒದಗಿಸಲಾಗಿದೆ. ಎಸ್.ಸಿ, ಎಸ್.ಟಿ BPL ಕಾರ್ಡ್ ಹೊಂದಿದವರಿಗೆ ಅಮರ್ ಜ್ಯೋತಿ ಯೋಜನೆಯಡಿ 75 ಯೂನಿಟ್ ಉಚಿತ ವಿದ್ಯುತ್. ಮಾರಣಾಂತಿಕ ಕಾಯಿಲೆ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರಿಗೆ 50,000 ರೂ. ಆರ್ಥಿಕ ಭದ್ರತೆ ಜೊತೆಗೆ ಸ್ವಯಂ ನಿವೃತ್ತಿ ಅವಕಾಶ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ.

ಸಾರ್ವಜನಿಕರಿಗೆ ದ್ವಿತೀಯ ಹಾಗೂ ತೃತೀಯ ಆರೈಕೆ ಸೇವೆಗಳನ್ನು ಒದಗಿಸಲು 2022-23ನೇ ಸಾಲಿನಲ್ಲಿ ಜಯದೇವ ಸಂಸ್ಥೆಯ ಅಡಿಯಲ್ಲಿ 263 ಕೋಟಿ ರೂ. ವೆಚ್ಚದಲ್ಲಿ, ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ 50 ಹಾಸಿಗೆ ಸಾಮಥ್ರ್ಯ ಹಾಗೂ ಹುಬ್ಬಳ್ಳಿಯಲ್ಲಿ 430 ಹಾಸಿಗೆ ಸಾಮಥ್ರ್ಯದ ಹೃದ್ರೋಗ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಬೆಂಗಳೂರಿನ ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 500 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಇಂದಿನ ಬಜೆಟ್ ನಲ್ಲಿ ಬೆಂಗಲೂರು ನಗರ ಅಭಿವೃದ್ಧಿಗೆ ಬಂಪರ್ ಕೊಡುಗೆ ನೀಡಲಾಗಿದ್ದು, ಬೆಂಗಳೂರಿನಲ್ಲಿ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ದೊರಕಿಸುವುದು ಸರ್ಕಾರದ ಆದ್ಯತೆಯಾಗಿದೆ. ಈ ಉದ್ದೇಶಕ್ಕಾಗಿ 2022-23 ನೇ ಸಾಲಿನಲ್ಲಿ 243 ವಾರ್ಡ್‍ಗಳಲ್ಲಿ ನಮ್ಮ ಕ್ಲಿನಿಕ್ ಮತ್ತು 27 ಸ್ಮಾರ್ಟ್ ವರ್ಚುಯಲ್ ಕ್ಲಿನಿಕ್ ಗಳನ್ನು ಅನುಮೋದಿಸಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ 50 ಡಯಾಲಿಸಿಸ್ ಹಾಸಿಗೆಗಳು ಮತ್ತು 300 ಹಾಸಿಗೆಗಳ ಸಾಮಥ್ರ್ಯದ ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ. ಮಹಾನಗರದ ಆರೋಗ್ಯ ಆಡಳಿತ ವ್ಯವಸ್ಥೆಯನ್ನು ಬೆಂಗಳೂರು ಹೆಲ್ತ್ ಸಿಸ್ಟಮ್ಸ್ ಎಂದು ಪುನರ್ ರಚನೆ ಮಾಡಲು ಉದ್ದೇಶಿಸಲಾಗಿದೆ. ಬೆಂಗಳೂರು ಮಹಾನಗರದ ಮಾರುಕಟ್ಟೆಗಳು, ಬೃಹತ್ ವಾಣಿಜ್ಯ ಮಳಿಗೆಗಳು ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರ ಅನುಕೂಲಕ್ಕಾಗಿ 250 ಸುಸಜ್ಜಿತ ‘She Toilet’ ಗಳನ್ನು ನಿರ್ಮಿಸಲಾಗುವುದು. ಈ ಸಂಕೀರ್ಣದಲ್ಲಿ ಶೌಚಾಲಯಗಳು, ಫೀಡಿಂಗ್ ರೂಂಗಳು, ಮೊಬೈಲ್ ಚಾಜಿರ್ಂಗ್, ತುರ್ತು SOS ಸೌಲಭ್ಯಗಳು ಇತ್ಯಾದಿಯನ್ನು ಒಳಗೊಂಡಂತೆ, ಆಧುನಿಕ ವಿನ್ಯಾಸದೊಂದಿಗೆ 50 ಕೋಟಿ ರೂ. ಗಳಲ್ಲಿ ನಿರ್ಮಿಸಲಾಗುವುದು.

ಅಮೃತ ನಗರೋತ್ಥಾನ ಯೋಜನೆಯಡಿ ಬೆಂಗಳೂರು ನಗರದಲ್ಲಿ 6,000 ಕೋಟಿ ವೆಚ್ಚದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಹೈ ಡೆನ್ಸಿಟಿ ಯೋಜನೆಯಡಿಯಲ್ಲಿ ಒಟ್ಟು 108 ಕಿ.ಮೀ. ರಸ್ತೆಗಳನ್ನು 273 ಕೋಟಿ ರೂ. ಗಳ ಅಂದಾಜಿನಲ್ಲಿ ತೆಗೆದುಕೊಳ್ಳಲಾಗಿದೆ. ಮಳೆ ನೀರು ಮುಕ್ತವಾಗಿ ಹರಿಯುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರವಾಹವನ್ನು ತಪ್ಪಿಸಲು, ಒಟ್ಟು 195 ಕಿ.ಮೀ. ಉದ್ದದ ಚರಂಡಿ ಮತ್ತು ಕಲ್ವರ್ಟ್‍ಗಳ ಅಭಿವೃದ್ಧಿಗಾಗಿ 1,813 ಕೋಟಿ ರೂ. ಗಳನ್ನು ಒದಗಿಸಲಾಗಿದೆ. ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು, ಹೆಚ್ಚು ಸಂಚಾರ ದಟ್ಟಣೆ ಇರುವ ಪ್ರಮುಖ 75 ಜಂಕ್ಷನ್‍ಗಳನ್ನು 150 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. ಇದಕ್ಕೆ ಪೂರಕವಾಗಿ Artificial Intelligence ನ ಬಳಕೆಯೊಂದಿಗೆ ಟ್ರಾಫಿಕ್ ಸಿಗ್ನಲ್‍ಗಳ ನಿರ್ವಹಣೆ ಮಾಡುವ ಮೂಲಕ Seamless Signalling ಅನ್ನು ಅಳವಡಿಸಿಕೊಂಡು ಸಂಚಾರ ದಟ್ಟಣೆ ಕಡಿಮೆ ಮಾಡಲಾಗುವುದು. ಹಾಗೂ ಕಳಸಾ ಬಂಡೂರಿ ನಾಲೆ ವಿಸ್ತರಣೆ ಯೋಜನೆಗೆ ಡಿಪಿಆರ್‍ಗೆ ಅನುಮೋದನೆ ಪಡೆಯಲಾಗಿದೆ. ಯೋಜನೆ ಅನುಷ್ಠಾನಕ್ಕೆ 1,000 ಕೋಟಿ ಅನುದಾನ ಘೋಷಿಸಲಾಗುಗತ್ತಿದೆ ಎಂದರು

ಹಾವೇರಿಯಲ್ಲಿ 1 ಲಕ್ಷ ಲೀಟರ್ ಸಾಮಥ್ರ್ಯದ ಮೆಗಾ ಡೈರಿ ಸ್ಥಾಪನೆಗೆ ಸರ್ಕಾರದಿಂದ 90 ಕೋಟಿ ರೂ. ಅನುದಾನ ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು, ಬಳ್ಳಾರಿ ಜಿಲ್ಲೆಯಲ್ಲಿ ದಿನಂಪ್ರತಿ 2 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸಾಮಥ್ರ್ಯದ ಮೆಗಾಡೈರಿಯನ್ನು 100 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 20,000 ಫಲಾನುಭವಿಗಳಿಗೆ 355 ಕೋಟಿ ರೂ. ವೆಚ್ಚದಲ್ಲಿ ಕುರಿ ಮತ್ತು ಮೇಕೆ ಘಟಕಗಳನ್ನು ಸ್ಥಾಪಿಸುವ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಸಿಎಂ ತಿಳಿಸಿದರು.

ಬಜೆಟ್ ನಲ್ಲಿ ಸಿಎಂ ಸಾರಾಯಿ, ಸೇಂದಿ ಬಾಡಿಗೆಗಳ ಅಬಕಾರಿ ಬಾಕಿ ಪಾವತಿದಾರರಿಗೆ ಗುಡ್ ನ್ಯೂಸ್ ನೀಡಿದ್ದು, 2023ರ ಜೂನ್ 30 ರ ಒಳಗೆ ಬಾಕಿ ಪಾವತಿ ಮಾಡಿದರೆ ಬಡ್ಡಿ ಮತ್ತು ದಂಡ ಪಾವತಿಯಲ್ಲಿ ಪರಿಹಾರ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಜೊತೆಗೆ ಎಸ್.ಸಿ, ಎಸ್.ಟಿ ಗುತ್ತಿಗೆದಾರರಿಗೆ 50 ಲಕ್ಷ ಮೊತ್ತದಿಂದ 1 ಕೋಟಿವರೆಗಿನ ಟೆಂಡರ್‍ನಲ್ಲಿ ಶೇ 24ರವರೆಗೆ ಮೀಸಲಾತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರಸಕ್ತ ವರ್ಷ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು. ಮೈಸೂರು, ಶಿವಮೊಗ್ಗ ಮತ್ತು ಕಲಬುರಗಿಗಳಲ್ಲಿ ಕಿದ್ವಾಯಿ ಸಂಸ್ಥೆಯಡಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಜತೆಗೆ ಪ್ರಸಕ್ತ ವರ್ಷದಲ್ಲಿ ರಾಯಚೂರಿನಲ್ಲಿ ಏಮ್ಸ್ ಮಾದರಿಯ ಆಸ್ಪತ್ರೆ ಸ್ಥಾಪಿಸಲಾಗುವುದು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ರಾಜ್ಯದ ಪ್ರಥಮ ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು ಎಂದು ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿದೆ. ಜತೆಗೆ, ಕಾಡಾನೆ ಹಾವಳಿ ತಡೆಗೆ ಚಿಕ್ಕಮಗಳೂರು, ಹಾಸನ, ಮೈಸೂರು, ಕೊಡಗು ಜಿಲ್ಲೆಗಳಲ್ಲಿ ರಚಿಸಿರುವ ಕಾಡಾನೆ ಕಾರ್ಯಪಡೆಯನ್ನು ಮೈಸೂರು ಹಾಗೂ ಮಂಡ್ಯಕ್ಕೂ ವಿಸ್ತರಿಸಿ ಹೊಸದಾಗಿ 199 ಸಿಬ್ಬಂದಿ ನೇಮಕಾತಿಗೆ ನಿರ್ಧರಿಸಲಾಗಿದೆ.

ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ?: ಶಿಕ್ಷಣ ಕ್ಷೇತ್ರಕ್ಕೆ 37,960 ಕೋಟಿ ರೂಪಾಯಿ ಮೀಸಲು, ಜಲಸಂಪನ್ಮೂಲ ಇಲಾಖೆಗೆ 22,854 ಕೋಟಿ ರೂ.ಗಳು, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್‍ಗೆ 20,494 ಕೋಟಿ ರೂ., ನಗರಾಭಿವೃದ್ಧಿ ಇಲಾಖೆಗೆ ಈ ಬಾರಿ 17,938 ಕೋಟಿ ರೂ, ಕಂದಾಯ ಇಲಾಖೆಗೆ 2023-24ರಲ್ಲಿ 15,943 ಕೋಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ 15,151 ಕೋಟಿ ರೂ, ಒಳಾಡಳಿತ ಹಾಗೂ ಸಾರಿಗೆ ಇಲಾಖೆಗೆ 14,509 ಕೋಟಿ, ಇಂಧನ ಇಲಾಖೆಗೆ 13,803 ಕೋಟಿ ರೂ., ಸಮಾಜಕಲ್ಯಾಣ ಇಲಾಖೆಗೆ ಒಟ್ಟು 11,163 ಕೋಟಿ ರೂ., ಲೋಕೋಪಯೋಗಿ ಇಲಾಖೆಗೆ 10,741 ಕೋಟಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 9,456 ಕೋಟಿ ರೂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 5,676 ಕೋಟಿ, ಆಹಾರ ಇಲಾಖೆಗೆ 4,600 ಕೋಟಿ ರೂ. ಮೀಸಲು ವಸತಿ ಇಲಾಖೆಗೆ ಈ ಬಾರಿ ಒಟ್ಟು 3,787 ಕೋಟಿ ರೂಪಾಯಿ ಹಣ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!