ಫೇಸ್ ಬುಕ್ ದೋಖಾ: ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆ
ಮಂಗಳೂರು: ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ವಜ್ರ ಉಡುಗೊರೆ ಕಳುಹಿಸುವುದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ 1.35 ಲಕ್ಷ ರೂಪಾಯಿ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಜ.3 ರಂದು ಫೇಸ್ಬುಕ್ ಮೂಲಕ ಪರಿಚಯವಾದ ರೆನಾಲ್ಟ್ ಫ್ರಿನ್ಸ್ ಕ್ರಿಸ್ಟಫರ್ ಎಂಬಾತ ವ್ಯಕ್ತಿಯೊಬ್ಬರೊಂದಿಗೆ ಚಾಟಿಂಗ್ ನಡೆಸುತ್ತಿದ್ದ. ಆತ್ಮಿಯವಾಗಿ ಮಾತುಕತೆ ನಡೆಸುತ್ತಿದ್ದ. ಈ ವೇಳೆ ಚಿನ್ನ, ವಜ್ರಾಭರಣಗಳನ್ನು ಉಡುಗೊರೆಯಾಗಿ ಕಳುಹಿಸುವುದಾಗಿ ಹೇಳಿ ನಂಬಿಸಿದ್ದ.
ಈ ನಡುವೆ ಜ.18 ರಂದು ದಿಲ್ಲಿಯ ಕಸ್ಟಮ್ಸ್ ಆಫೀಸರ್ ಎಂದು ಹೇಳಿ ಮಹಿಳೆಯೊಬ್ಬಳು ಕರೆ ಮಾಡಿ, ಏರ್ಪೋರ್ಟ್ ಗೆ ಒಂದು ಪಾರ್ಸೆಲ್ ಬಂದಿದ್ದು, ಅದಕ್ಕೆ ಡೆಲಿವರಿ ಚಾರ್ಜ್ 30 ಸಾವಿರ ರೂ. ನೀಡುವಂತೆ ಕೋರಿದ್ದಳು. ಈ ವಿಚಾರವಾಗಿ ಜ.20ರಂದು ಮತ್ತೆ ಕರೆ ಬಂದಿದ್ದು, ಮಹಿಳೆಯು ವಿವಿಧ ಕಾರಣಗಳನ್ನು ತಿಳಿಸಿ 1.05 ಲಕ್ಷ ರೂ. ವಿವಿಧ ಬ್ಯಾಂಕ್ಗಳಿಗೆ ವರ್ಗಾವಣೆ ಮಾಡುವಂತೆ ತಿಳಿಸಿದ್ದಳು. ಒಟ್ಟಾರೆ ಹಂತ ಹಂತವಾಗಿ ಒಟ್ಟು 1.35 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ವ್ಯಕ್ತಿ ತಿಳಿಸಿದ್ದಾರೆ. ನಗರದ ಸೈಬರ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.