ಮಂಗಳೂರು, ಕೊಯಮತ್ತೂರುನಲ್ಲಿ ಸ್ಪೋಟ ಪ್ರಕರಣ: 40 ಕಡೆಗಳಲ್ಲಿ ಎನ್‍ಐಎ ಶೋಧ

ನವದೆಹಲಿ/ಚೆನ್ನೈ ಫೆ.16 : ಮಂಗಳೂರು ಹಾಗೂ ಕೊಯಮತ್ತೂರು ನಲ್ಲಿ ನಡೆದ ಎರಡು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳವು (ಎನ್‍ಐಎ) ಕರ್ನಾಟಕ, ತಮಿಳುನಾಡು ಹಾಗೂ ಕೇರಳದ ಒಟ್ಟು 40 ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದೆ ಎಂದು ತಿಳಿದು ಬಂದಿದೆ.

ಸ್ಥಳೀಯ ಪೊಲೀಸರ ಬಿಗಿ ಭದ್ರತೆ ನಡುವೆ ಬೆಳಿಗ್ಗೆ 5 ಗಂಟೆಗೆ ಆರಂಭಗೊಂಡ ಶೋಧ ಕಾರ್ಯ ಹಲವು ಗಂಟೆಗಳವರೆಗೆ ನಡೆಯಿತು. ಈ ವೇಳೆ ತಿರುಚಿರಾಪಳ್ಳಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಯೊಬ್ಬರ ಮನೆಯಲ್ಲಿ ಶೋಧ ನಡೆದಿದೆ. ಮೈಲಾಡುತುರೈನಲ್ಲಿ ತಂದೆ ಹಾಗೂ ಪುತ್ರನಿಗೆ ಸಂಬಂಧಿಸಿದ ಮನೆಯಲ್ಲಿ ಶೋಧ ನಡೆಸಲಾಯಿತು. ಈ ಇಬ್ಬರು ಮಸ್ಕತ್ ನಲ್ಲಿ ಕಾರು ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೊಯಮತ್ತೂರು ಸ್ಫೋಟ ಪ್ರಕರಣದ ಶಂಕಿತ ಆರೋಪಿಗಳ ಜೊತೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದ ಮಹಿಳೆಯ ತೆಂಕಾಸಿಯಲ್ಲಿರುವ ಮನೆಯಲ್ಲಿಯೂ ಎನ್‍ಐಎ ಅಧಿಕಾರಿಗಳು ಶೋಧ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಎನ್‍ಐಎ ವಕ್ತಾರರು, ಕೊಯಮತ್ತೂರು ಸ್ಫೋಟಕ್ಕೆ ಸಂಬಂಧಿಸಿ 32 ಸ್ಥಳಗಳಲ್ಲಿ ಹಾಗೂ ಮಂಗಳೂರು ಸ್ಫೋಟಕ್ಕೆ ಸಂಬಂಧಿಸಿ ಮೈಸೂರು ಸೇರಿದಂತೆ 8 ಸ್ಥಳಗಳಲ್ಲಿ ಶೋಧ ನಡೆಸಲಾಯಿತು’. ಈ ವೇಳೆ ‘ಭಾರಿ ಪ್ರಮಾಣದಲ್ಲಿ ಡಿಜಿಟಲ್ ಸಾಧನಗಳು, 4 ಲಕ್ಷ ನಗದು, ಆಧಾರ್ ಕಾರ್ಡುಗಳು, ಸಿಮ್‍ಗಳು ಹಾಗೂ ಮೊಬೈಲ್‍ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ಹಾಗೂ ಮಂಗಳೂರಿನಲ್ಲಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ, ಮೈಸೂರಿನಲ್ಲಿ ಒಂದು ಸ್ಥಳ, ಕೇರಳದ ಎರ್ನಾಕುಲಂನಲ್ಲಿ 4, ತಮಿಳುನಾಡಿನ ತಿರುವೂರಿನಲ್ಲಿ 2 ಹಾಗೂ ಕೊಯಮತ್ತೂರಿನ ಒಂದು ಕಡೆಯಲ್ಲಿ ಹಾಗೂ ಕೊಯಮತ್ತೂರಿನಲ್ಲಿ ಸಂಭವಿಸಿದ್ದ ಕಾರು ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ, ಕೊಯಮತ್ತೂರಿನ 14 ಸ್ಥಳಗಳಲ್ಲಿ, ತಿರುಚಿನಾಪಳ್ಳಿ, ತೂತ್ತುಕುಡಿ, ದಿಂಡಿಗಲ್, ಮೈಲಾಡುತುರೈ, ಕೃಷ್ಣಗಿರಿ, ಕನ್ಯಾಕುಮಾರಿ, ತೆಂಕಾಸಿ ಹಾಗೂ ಕೇರಳದ ಎರ್ನಾಕುಲಂನ ತಲಾ ಒಂದು ಸ್ಥಳದಲ್ಲಿ ಶೋಧ ನಡೆದಿದೆ. ತಮಿಳುನಾಡಿನ ನೀಲಗಿರಿಯಲ್ಲಿ 2, ತಿರುನಲ್ವೇಲಿ- 3, ಚೆನ್ನೈ-3, ತಿರುವಣ್ಣಾಮಲೈನ 2 ಕಡೆಗಳಲ್ಲಿ ಶೋಧ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!