ಟೆಂಡರ್ ನಲ್ಲಿ ಅಕ್ರಮ ಆರೋಪ: ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡ ಯಡಿಯೂರಪ್ಪ
ಬೆಂಗಳೂರು ಫೆ.15 : ನೀರಾವರಿ ನಿಗಮದ ಟೆಂಡರ್ ನಲ್ಲಿ ಅಕ್ರಮ ಆಗಿದೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಅವರು ಬರೆದಿರುವ ಪತ್ರವನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ನಡೆಸಿ ಬಿಜೆಪಿ ನಾಯಕರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿರುವುದನ್ನು ಖಂಡಿಸಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಅವರು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ ಅವರು, ಕಾಂಗ್ರೆಸ್ ನಾಯಕರು ಹುಚ್ಚರು, ತಲೆ ತಿರುಕರು, ಬಾಯಿಗೆ ಬಂದಂತೆ ಕಪೋಲ ಕಲ್ಪಿತ ಆರೋಪಗಳನ್ನು ಮಾಡುತ್ತಿದ್ದಾರೆ. ತಲೆ ತಿರುಕರು ಮತ್ತು ತಲೆ ಸರಿ ಇಲ್ಲದವರು ಮಾತ್ರ ಹೀಗೆ ಮಾತನಾಡಲು ಸಾಧ್ಯ. ತಲೆ ಸರಿ ಇದ್ದವರು ಹೀಗೆಲ್ಲ ಮಾತನಾಡಲು ಸಾಧ್ಯವಿಲ್ಲ. ತಾವು ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಹೀಗಾಗಿ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ. ಇವರ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಸದನದಲ್ಲಿ ಮಾತನಾಡಲಿ ಅವರಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದು ಕಿಡಿಕಾರಿದ್ದಾರೆ.
ತಾವು ಅಧಿವೇಶನಕ್ಕೆ ಬರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ, ವಿರೋಧ ಪಕ್ಷದ ನಾಯಕರಿಗೆ ಈ ಮಾತು ಶೋಭೆ ತರುವುದಿಲ್ಲ ಎಂದ ಅವರು, ಹಿಂದೆ ಶೇ. 40 ಲಂಚದ ಆರೋಪ ಮಾಡಿದರು. ಅದಕ್ಕೆ ಒಂದೇ ಒಂದು ದಾಖಲೆ ಕೊಡಲಿಲ್ಲ. ಕಾಂಗ್ರೆಸ್ ನವರು ಒಂದೇ ಒಂದು ಆರೋಪ ಸಾಬೀತು ಮಾಡಲಿಲ್ಲ. ನೀರಾವರಿ ಟೆಂಡರ್ ನಲ್ಲಿ ಅಕ್ರಮ ಆಗಿದ್ದರೆ ದಾಖಲೆ ಕೊಡಲಿ. ಗಾಳಿಯಲ್ಲಿ ಗುಂಡು ಹಾರಿಸಿದಂತೆ ಮಾತನಾಡುವುದು ಸರಿಯಲ್ಲ. ಗೂಳಿಹಟ್ಟಿ ಶೇಖರ್ ಅವರಲ್ಲೂ ದಾಖಲೆ ಕೇಳಿದ್ದೇವೆ ಎಂದರು.