ಗ್ರಾಮ ಪಂಚಾಯಿತಿ ನೌಕರರು ಸರ್ಕಾರಿ ನೌಕರರಲ್ಲ- ಕೋಟ ಶ್ರೀನಿವಾಸ ಪೂಜಾರಿ
ಬೆಂಗಳೂರು ಫೆ.15 : ಗ್ರಾಮ ಪಂಚಾಯಿತಿ ನೌಕರರು ಸರ್ಕಾರಿ ನೌಕರರಾಗಿರುವುದಿಲ್ಲ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರ ನೌಕರರಿಗೆ ಬಿಗ್ ಶಾಕ್ ನೀಡಿದೆ.
ವಿಧಾನಪರಿಷತ್ ನಲ್ಲಿ ಈ ವಿಚಾರವಾಗಿ ಮಾಹಿತಿ ನೀಡಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಗ್ರಾಮಪಂಚಾಯಿತಿ ನೌಕರರು ಸರ್ಕಾರಿ ನೌಕರರಾಗುವುದಿಲ್ಲ. ನೌಕರರು ಸ್ಥಳೀಯ ಪ್ರಾಧಿಕಾರವಾದ ಗ್ರಾಮ ಪಂಚಾಯಿತಿಯ ನೌಕರರಾಗಿದ್ದು, ಸಿ ಮತ್ತು ಡಿ ದರ್ಜೆ ನೌಕರರೆಂದು ಪರಿಗಣಿಸಿ ಸರ್ಕಾರಿ ನೌಕರರಂತೆ ವೇತನ ಶ್ರೇಣಿ ನಿಗದಿಪಡಿಸಲು ಆಡಳಿತಾತ್ಮಕವಾಗಿ ಸಾಧ್ಯವಿಲ್ಲ ಎಂದು
ಹೇಳಿದ್ದಾರೆ.
ಹಾಗೂ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದ ಮಾದರಿ, ನೇಮಕಾತಿ ವಿಧಾನ ಮತ್ತು ವೇತನ ಶ್ರೇಣಿ ನಿಗದಿಪಡಿಸಿದ್ದು, ಅದರಂತೆ ಮಂಜೂರಾದ ಹುದ್ದೆಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮೋದನೆ ಪಡೆದು ಸ್ಥಳೀಯ ಪ್ರಾಧಿಕಾರದ ಗ್ರಾಮಪಂಚಾಯಿತಿ ಖಾಯಂ ನೌಕರಾಗಿರುತ್ತಾರೆ ಎಂದು ತಿಳಿಸಿದ್ದಾರೆ.