ದಾವಣಗೆರೆ ಅಪಘಾತದಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ದಾವಣಗೆರೆ ಫೆ.15 : ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಫೆ.11 ರಂದು ತಡರಾತ್ರಿ ನಡೆದಿದ್ದ ಅಪಘಾತದಲ್ಲಿ ಮೂವರು ಯುವಕರು ಮೃತಪಟ್ಟ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಅಪಘಾತ ಪ್ರಕರಣವನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ಇದು ಅಪಘಾತವಲ್ಲ ಕೊಲೆ ಹಾಗೂ ದರೋಡೆ ಪ್ರಕರಣ ಎಂದು ತಿಳಿದು ಬಂದಿದ್ದು, ಈ ಸಂಬಂಧ ಮೂವರು ಯುವಕರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಲಾರಿ ಚಾಲಕ ಹಾಗೂ ದಾವಣಗೆರೆಯ ಮೂವರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಗ್ರಾಮಾಂತರ, ಡಿಸಿಐಬಿ ಪೊಲೀಸರು ಚೆನ್ನೈಯಲ್ಲಿ ಲಾರಿ ಸಮೇತ ಕೊಲೆ ಹಂತಕ ಉತ್ತರ ಪ್ರದೇಶ ಮೂಲದ ಲಾರಿ ಚಾಲಕ ಭೋಲೆ ಯಾದವ್ ಹಾಗೂ ದರೋಡೆ ಮಾಡಿದ್ದ ಗಣೇಶ್, ರಾಹುಲ್, ನಾಗರಾಜ್ ಎಂಬ ಮೂವರನ್ನು ಬಂಧಿಸಿದ್ದಾರೆ. ಹಾಗೂ ಬಂಧಿತ ಎಲ್ಲಾ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಆನಗೋಡು ಗ್ರಾಮದ ಸಮೀಪದ ಎನ್.ಎಚ್-48 ರಲ್ಲಿ ಫೆ. 11 ರ ಬೆಳಗಿನ ಜಾವ ದಾವಣಗೆರೆ ನಗರದ ಶ್ರೀರಾಮನಗರ ವಾಸಿಗಳಾದ ಪರಶುರಾಮ, ಶಿವ ಕುಮಾರ್, ಸಂದೇಶ್ ಎಂಬುವರ ಶವ ಪತ್ತೆಯಾಗಿದ್ದವು. ಆರಂಭದಲ್ಲಿ ದಾವಣಗೆರೆ ತಾಲೂಕಿನ ಕಾಟೀಹಳ್ಳಿಯಲ್ಲಿ ಜಾತ್ರೆಯಲ್ಲಿ ಭಾಗವಹಿಸಿ ಶ್ರೀರಾಮನಗರಕ್ಕೆ ವಾಪಸ್ ಬರುವಾಗ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಮೇಲ್ನೋಟಕ್ಕೆ ಅಪಘಾತ ಎಂಬಂತೆ ಕಂಡು ಬಂದರೂ ಪೊಲೀಸರಿಗೆ ಇಡೀ ಅಪಘಾತದ ಬಗ್ಗೆಯೇ ಸಂಶಯ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಸಿಸಿ ಟಿವಿ, ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಅಪಘಾತದ ಯಾವ ಸುಳಿವೂ ಸಿಕ್ಕಿರಲಿಲ್ಲ. ಹಾಗಾಗಿ ಪೊಲೀಸರು ಲಾರಿ ಚಾಲಕನ ಬೆನ್ನತ್ತಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಪಘಾತ ಅಲ್ಲ ಕೊಲೆ. ದರೋಡೆ ಮಾಡಿ, ಬೈಕ್ ನಲ್ಲಿ ಪರಾರಿಯಾಗುತ್ತಿದ್ದವರ ಮೇಲೆ ಚಾಲಕ ಲಾರಿ ಹತ್ತಿಸಿದ್ದರಿಂದ ಮೂವರು ಸಾವನ್ನಪ್ಪಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಮೃತ ಪರಶುರಾಮ, ಶಿವಕುಮಾರ್, ಸಂದೇಶ್ ಅವರೊಟ್ಟಿಗೆ ಗಣೇಶ್, ರಾಹುಲ್ ಮತ್ತು ನಾಗರಾಜ್ ಎಂಬುವರು ಎರಡು ಬೈಕ್ ನಲ್ಲಿ ತೆರಳಿ ಆನಗೋಡು ಗ್ರಾಮದ ಬಳಿ ರಸ್ತೆ ಪಕ್ಕದಲ್ಲಿ ಲಾರಿ ಚಾಲಕನನ್ನು ಹೆದರಿಸಿ, ಹಲ್ಲೆ ಮಾಡಿ 8 ಸಾವಿರ ನಗದು, ಮೊಬೈಲ್ ಹಾಗು ಇತರೆ ವಸ್ತುಗಳನ್ನು ಕಿತ್ತುಕೊಂಡಿದ್ದರು. ದರೋಡೆ ಮಾಡಿಕೊಂಡು ಹೋದ ಬೈಕ್ ಗಳ ಮೇಲೆ ಚಾಲಕ ಲಾರಿ ಹತ್ತಿಸಿದ್ದರ ಪರಿಣಾಮ ಒಂದು ಬೈಕ್ ನಲ್ಲಿ ಹೋಗುತ್ತಿದ್ದ ಪರಶುರಾಮ, ಶಿವಕುಮಾರ ಮತ್ತು ಸಂದೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನೊಂದು ಬೈಕ್ ನಲ್ಲಿದ್ದ ನಾಗರಾಜ, ಗಣೇಶ ಮತ್ತು ರಾಹುಲ್ ಗಾಯಗೊಂಡಿದ್ದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!