ಕುಂದಗನ್ನಡ ಭಾಷಾ ಅಕಾಡೆಮಿ ರಚನೆಗೆ ಆಗ್ರಹ-ಡಾ. ಮಂಜುನಾಥ ಭಂಡಾರಿ

ಬೆಂಗಳೂರು ಫೆ.15 : 25 ಲಕ್ಷ ಜನರ ಆಶಯದಂತೆ ‘ಕುಂದಾಪುರ ಕನ್ನಡ ಭಾಷಾ ಅಕಾಡೆಮಿ’ ಸ್ಥಾಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಶೂನ್ಯವೇಳೆಯಲ್ಲಿ ಸೋಮವಾರ ಸಭಾಪತಿ ಗಮನ ಸೆಳೆದ ಅವರು, ಇಂದು ರಾಜ್ಯದಲ್ಲಿ ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದ ಭಾಷೆಗಳಿಗೆ ಆಕಾಡೆಮಿಗಳು ರಚನೆಯಾಗಿರುವಾಗ, ಬಹುಸಮುದಾಯದ ವಿಸ್ತಾರವಾದ ಪ್ರದೇಶದಲ್ಲಿ ವ್ಯಾಪಿಸಿರುವ 25 ಲಕ್ಷಕ್ಕೂ ಹೆಚ್ಚು ಜನರ ಹೃದಯ ಭಾಷೆಯಾದ ಕುಂದಾಪುರ ಕನ್ನಡಕ್ಕೆ ಜನರು ಹೋರಾಟಕ್ಕೆ ಇಳಿಯುವ ಮೊದಲೇ ಅಕಾಡೆಮಿ ಸ್ಥಾಪಿಸುವ ಅನಿವಾರ್ಯತೆ ಇದೆ. ಆದ್ದರಿಂದ ಸುಮಾರು 25 ಲಕ್ಷ ಜನರ ಆಶಯದಂತೆ ‘ಕುಂದಾಪುರ ಕನ್ನಡ ಭಾಷಾ ಅಕಾಡೆಮಿ’ ಸ್ಥಾಪಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರನ್ನು ಒತ್ತಾಯಿಸಿದರು.

ಕರ್ನಾಟಕಕ್ಕೆ, ಭಾರತ ದೇಶಕ್ಕೆ ವಿವಿಧ ವಿಷಯಗಳಲ್ಲಿ ಅದ್ಭುತವಾದ ಕೊಡುಗೆ ನೀಡಿದ ಊರು ಕುಂದಾಪುರ. ಕುಂದಾಪ್ರ ಭಾಷೆ, ಸಂಸ್ಕøತಿ ವಿಚಾರದಲ್ಲಂತೂ ತನ್ನದೇ ಆದ ವೈಶಿಷ್ಟ್ಯ ಉಳಿಸಿಕೊಂಡಿದೆ. ಬೈಂದೂರಿನಿಂದ ಬ್ರಹ್ಮಾವರದ ತನಕ, ಬಸ್ರೂರಿನಿಂದ ಹೆಬ್ರಿ ತನಕ ಮಲೆನಾಡು, ಕರಾವಳಿಯ 300ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಂದಗನ್ನಡ ಭಾಷೆಯಲ್ಲೇ ಸ್ಪಷ್ಟವಾಗಿ ಮಾತನಾಡುವ 25 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಆ ಜನರ ಆಟ ಪಾಠ, ಕೃಷಿ, ಮೀನುಗಾರಿಕೆ ಚಟುವಟಿಕೆ, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆ, ಕಂಬಳ, ಕೋಲ, ಹೋಳಿ ಆಚರಣೆಗಳಲ್ಲಿ ಕುಂದಾಪುರ ಕನ್ನಡ ಭಾಷೆಯ ಸೊಬಗು ಕಾಣಸಿಗುತ್ತದೆ. ತಾಲ್ಲೂಕು ಬದಲಾದಾಗ ಕುಲಕಸಬುಗಳಿಗೆ ಅನುಗುಣವಾಗಿ ಕೆಲವು ಶಬ್ದಗಳು ಬದಲಾದರೂ ಕುಂದ ಕನ್ನಡ ಸಮೃದ್ಧಿ ಕಾಣುತ್ತದೆ ಎಂದರು.

ಹಾಗೂ ಕಳೆದ ಒಂದು ಶತಮಾನದಲ್ಲಿ ಕುಂದ ಕನ್ನಡ ಭಾಷೆಯ ಬಳಕೆಗಳ ಸ್ಪಷ್ಟ ದಾಖಲೆ ಸಿಗುತ್ತದೆ. ತಮ್ಮ ಸಾಹಿತ್ಯದಲ್ಲಿ, ಪಾತ್ರಗಳ ಆಡುಮಾತಿನಲ್ಲಿ ಕುಂದಾಪ್ರ ಕನ್ನಡವನ್ನೇ ಬಳಸಿ ವೈದೇಹಿ, ಮಿತಾ ವೆಂಕಟರಾಜ್, ಗಾಯತ್ರಿ ನಾವಡ, ಮಾಧುರಿ ಕೃಷ್ಣ, ವರಮಹಾಲಕ್ಷ್ಮಿ ಹೊಳ್ಳ ಮುಂತಾದವರು ಯಶಸ್ವಿಯಾಗಿದ್ದಾರೆ ಎಂದು ವಿವರಿಸಿದರು.

Leave a Reply

Your email address will not be published. Required fields are marked *

error: Content is protected !!