ತಾ.ಪಂ, ಜಿ.ಪಂ ಚುನಾವಣೆಯ ಕ್ಷೇತ್ರ ಪುನರ್ ವಿಂಗಡಣೆಗೆ 10 ದಿನ ಗಡುವು
ಬೆಂಗಳೂರು ಫೆ.15 : ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆಗೆ ಕ್ಷೇತ್ರ ಪುನರ್ ವಿಂಗಡಣೆ ನಡೆಸಲು 10 ದಿನಗಳ ಗಡುವು ನೀಡಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು, ‘ಈಗಾಗಲೇ ಕ್ಷೇತ್ರ ಪುನವಿರ್ಂಗಡಣೆ ಪೂರ್ಣಗೊಳಿಸಲಾಗಿದೆ. 2023ರ ಜನವರಿ 30ರಂದು ಸೀಮಾ ನಿರ್ಣಯ ಆಯೋಗವು ಕ್ಷೇತ್ರ ಪುನರ್ ವಿಂಗಡಣಾ ಅಧಿಸೂಚನೆ ಪ್ರಕಟಿಸಿದ್ದು, ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.
‘ಒಂದು ವಾರದಲ್ಲಿ ಅಧಿಸೂಚನೆ ಪ್ರಕಟಿಸಲಾಗುವುದು. ಈ ದಿಸೆಯಲ್ಲಿ ಔಪಚಾರಿಕ ಪ್ರಕ್ರಿಯೆ ಮಾತ್ರವೇ ಬಾಕಿ ಇದೆ. ಬಿಬಿಎಂಪಿ ಪ್ರಕರಣ ದಲ್ಲಿ ರಾಜಕೀಯ ಮೀಸಲಾತಿ ನಿಗದಿ ಪಡಿಸಲು ಏಪ್ರಿಲ್ 1ರವರೆಗೆ ಸುಪ್ರೀಂ ಕೋರ್ಟ್ ಕಾಲಾವಕಾಶ ನೀಡಿದೆ. ಈ ಮಿತಿಯೊಳಗೆ ನಾವು ಮೀಸಲಾತಿ ಸಿದ್ಧಪಡಿಸಿ ಚುನಾವಣಾ ಆಯೋಗಕ್ಕೆ ನೀಡುತ್ತೇವೆ. ಇಂದಿನಿಂದ ಒಂದು ವಾರದಲ್ಲಿ ಅಧಿಸೂಚನೆ ಪ್ರಕಟಿಸುತ್ತೇವೆ’ ಎಂದು ಹೇಳಿದರು.
ಹಾಗೂ ‘ವಾರ್ಡ್ ಮೀಸಲಾತಿಗೆ ಸಂಬಂಧಿಸಿದಂತೆ ಆಯೋಗ ರಚನೆ ಮಾಡಲಾಗಿದ್ದು, ರಾಜಕೀಯ ಪ್ರಾತಿನಿಧ್ಯ ಪರಿಗಣಿಸಿ ಮೀಸಲಾತಿ ಕಲ್ಪಿಸಲು ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ಪ್ರಕರಣವು ಸುಪ್ರೀಂ ಕೋರ್ಟ್‍ನಲ್ಲಿದ್ದು ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನಿಗದಿಗೊಳಿಸಲು 2023ರ ಏಪ್ರಿಲ್ 1ರವರೆಗೆ ಕಾಲಾವಕಾಶ ನೀಡಿದೆ’ ಎಂದು ವಿವರಿಸಿದರು.