ವಿಧಾನ ಸಭೆ ಚುನಾವಣೆ: 25 ಕ್ಷೇತ್ರಗಳಲ್ಲಿ ಬ್ರಾಹ್ಮಣರಿಗೆ ಟಿಕೆಟ್ ನೀಡಲು ಆಗ್ರಹ

ಬೆಂಗಳೂರು, ಫೆ.11 : ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಬೆಂಗಳೂರಿನ ಜಯನಗರ ಸೇರಿದಂತೆ ಬ್ರಾಹ್ಮಣ ಸಮುದಾಯ ಹೆಚ್ಚಿರುವ ಸುಮಾರು 25 ವಿಧಾನಸಭಾ ಕ್ಷೇತ್ರಗಳಲ್ಲಿ ಬ್ರಾಹ್ಮಣರಿಗೆ ಮಾತ್ರ ಟಿಕೆಟ್ ನೀಡಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಗ್ರಹಿಸಿದೆ.

ಈ ಬಗ್ಗೆ ಇಂದು ನಗರದಲ್ಲಿ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಕಾರ್ಯಕಾರಣಿ ಸಭೆ ನಡೆಸಿದ್ದು, ಈ ಸಭೆಯಲ್ಲಿ ಅಧ್ಯಕ್ಷ ಅಶೋಕ ಹಾರನಹಳ್ಳಿ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಮುದಾಯದ ಮುಖಂಡರು ಪಾಲ್ಗೊಂಡು, ರಾಜಕೀಯ ಸ್ಥಾನಮಾನ ಕುರಿತು ಚರ್ಚಿಸಿದ್ದಾರೆ. ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ ವಿಪ್ರರು ಒಂದು ಲಕ್ಷ ಜನರಿದ್ದು, ಅದರಲ್ಲೂ ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ 35 ರಿಂದ 40 ಸಾವಿರ ಮತದಾರರು ನಿರ್ಣಾಯಕರಾಗಿದ್ದಾರೆ. ಅದೇ ರೀತಿ, ಬೆಂಗಳೂರಿನ ಜಯನಗರ, ಮಲ್ಲೇಶ್ವರಂ, ಬಸವನಗುಡಿ, ರಾಜಾಜಿನಗರ, ಉಡುಪಿ, ಶಿವಮೊಗ್ಗ, ಮಂಗಳೂರು ಸೇರಿದಂತೆ ಒಟ್ಟು 25 ಕ್ಷೇತ್ರಗಳಲ್ಲಿ ವಿಪ್ರರು ಅಧಿಕ ಸಂಖ್ಯೆಯಲ್ಲಿದ್ದು, ಅವರನ್ನು ಪರಿಗಣಿಸಿ ಈ ಬಾರಿ ಟಿಕೆಟ್ ನೀಡಲೇಬೇಕು ಎಂದು ಮನವಿ ಮಾಡಿದರು.

ಈ ಬಗ್ಗೆ ಮಾಹಿತಿ ನೀಡಿರುವ ಮಹಾಸಭಾದ ಉಪಾಧ್ಯಕ್ಷ ಸಿ.ಕೆ.ರಾಮಮೂರ್ತಿ ಅವರು, ಕೆಲ ಭಾಗದಲ್ಲಿ ವರ್ಷಗಳ ಹಿಂದಿನಿಂದಲೂ ವಿಪ್ರ ಸಮುದಾಯದ ನಾಯಕರು ಶಾಸಕರಾಗಿ, ವಿಧಾನ ಪರಿಷತ್ತಿನ ಸದಸ್ಯರಾಗಿ, ಸಂಸದರು, ಸಚಿವರಾಗಿ ಸಾರ್ವಜನಿಕ ಸೇವೆ ಸಲ್ಲಿಸಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳು ಬ್ರಾಹ್ಮರಣನ್ನು ಮತ ಬ್ಯಾಂಕ್‍ನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಹೊರತು ರಾಜಕೀಯ ಸ್ಥಾನಮಾನ ಕಲ್ಪಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಾಗೂ ರಾಜಧಾನಿ ಬೆಂಗಳೂರಿನಲ್ಲಿಯೇ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಬ್ರಾಹ್ಮಣ ಸಮುದಾಯದ ಮತದಾರರು ಹೆಚ್ಚಾಗಿದ್ದಾರೆ. ಹೀಗಾಗಿ, ಬರೀ ಬಿಜೆಪಿ ಪಕ್ಷ ಮಾತ್ರವಲ್ಲದೆ, ಎಲ್ಲಾ ಪಕ್ಷಗಳು ಜಾತಿಭೇದ ಇಲ್ಲದೆ ಬ್ರಾಹ್ಮಣರಿಗೆ ರಾಜಕೀಯ ಶಕ್ತಿ ತುಂಬಲು ಮುಂದೆ ಬರಬೇಕು ಎಂದು ಒತ್ತಾಯಿಸಿದರು.

ಹಾಗೂ ಈ ಬಗ್ಗೆ ಈಗಾಗಲೇ ರಾಜಕೀಯ ಪಕ್ಷಗಳ ವರಿಷ್ಠರಿಗೆ ಔಪಚಾರಿಕವಾಗಿ ಮಾತುಕತೆ ನಡೆಸಿ ಮನವಿ ಮಾಡಲಾಗಿದ್ದು, ಶೀಘ್ರದಲ್ಲಿ ಪತ್ರ ಮುಖೇನ ಟಿಕೆಟ್ ನೀಡುವಂತೆ ಒತ್ತಾಯಿಸಲಾಗುವುದು ಎಂದು ಸಭೆಯಲ್ಲಿ ಅಶೋಕ ಹಾರನಹಳ್ಳಿ ಅವರು ಹೇಳಿದ್ದಾರೆ

ಈ ಸಂದರ್ಭದಲ್ಲಿ ಸಭೆಯಲ್ಲಿ ಮಹಾಸಭಾದ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಭಟ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!