ಮಂಗಳೂರು: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಟ್ರಾವೆಲ್ ಏಜೆನ್ಸಿಯಿಂದ ಮೋಸ
ಮಂಗಳೂರು: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಅನ್ನುವ ಮಾತಿನಂತೆ, ಇತ್ತೀಚಿನ ದಿನಗಳಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಇದೀಗ ಇಂತಹದ್ದೇ ಒಂದು ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ. ದಕ್ಷಿಣ ಕೊರಿಯಾದಲ್ಲಿ ಉದ್ಯೋಗ ಹುಡುಕುತ್ತಿದ್ದ ಉಳ್ಳಾಲದ ಯುವಕನೋರ್ವನಿಗೆ ಇತ್ತೀಚಿಗೆ ಟ್ರಾವೆಲ್ ಏಜೆನ್ಸಿವೊಂದು 6 ಲಕ್ಷ ವಂಚಿಸಿರುವ ಘಟನೆ ನಡೆದಿದೆ.
ಡಿಪ್ಲೋಮಾ ಪದವೀಧರರಾಗಿರುವ ಮೊಹಮ್ಮದ್ ನಿಯಾಜ್ ಟ್ರಾವೆಲ್ ಏಜೆನ್ಸಿಯಿಂದ ಮೋಸಹೋದ ಯುವಕ. ಟ್ರಾವೆಲ್ ಏಜೆನ್ಸಿಯೊಂದು ದಕ್ಷಿಣ ಕೊರಿಯಾದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 6 ಲಕ್ಷ ಹಣ ಪಡೆದು ವಂಚಿಸಿರೋದಾಗಿ ಯುವಕ ಟ್ರಾವೆಲ್ ಏಜೆನ್ಸಿಯ ಮಾಲೀಕರ ವಿರುದ್ಧ ನಗರ ಪೊಲೀಸ್ ಆಯುಕ್ತರಲ್ಲಿ ದೂರು ದಾಖಲಿಸಿದ್ದಾರೆ.
ದಕ್ಷಿಣ ಕೊರಿಯಾದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಬಂದೂರಿನ ಮಂಗಳೂರು ಟೂರ್ಸ್ ಮತ್ತು ಟ್ರಾವೆಲ್ಸ್ ಮಾಲೀಕ ಶಮ್ಶೀರ್ ರಿಜ್ವಾನ್, ತಮ್ಮಿಂದ 6 ಲಕ್ಷ ರೂಪಾಯಿ ಪಡೆದುಕೊಂಡಿರುವುದಾಗಿ ಸಂತ್ರಸ್ತ ಆರೋಪಿಸಿದ್ದಾರೆ. ಅಲ್ಲದೆ ಜಿಲ್ಲೆಯ ಇತರ ಮೂವರು ಯುವಕರೊಂದಿಗೆ ತಮ್ಮ ಮಗನನ್ನು ಇಂಡೋನೇಷ್ಯಾದ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ಉಳಿಯುವಂತೆ ಮಾಡಲಾಗಿತ್ತು ಎಂದು ನಿಯಾಜ್ ತಂದೆ ಅಬ್ದುಲ್ ಅಜೀಜ್ ಅವರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ದಕ್ಷಿಣ ಕೊರಿಯಾದಲ್ಲಿ ತಮ್ಮ ಮಗನಿಗೆ ಉದ್ಯೋಗ ಕೊಡಿಸುವುದಾಗಿ ಎಲ್ಲಾ ದಾಖಲಾತಿಗಳನ್ನು ಪಡೆದುಕೊಂಡ ಶಮ್ಶೀರ್, ವೀಸಾಗೆಂದು 6 ಲಕ್ಷ ಕೇಳಿದ್ದು, ಆರು ಲಕ್ಷ ಕೊಟ್ಟರೆ ದಕ್ಷಿಣ ಕೊರಿಯಾದಲ್ಲಿ ಮಾನ್ಯತೆ ಪಡೆದ ಕಂಪನಿಯೊಂದಿಗೆ 2 ಲಕ್ಷ ಸಂಬಳದ ಮೆಕ್ಯಾನಿಕಲ್ ಎಂಜಿನಿಯರ್ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದಾನೆ. ಅಲ್ಲದೆ ಸಂದರ್ಶಕರ ವೀಸಾ ಆಧಾರದ ಮೇಲೆ ಇಂಡೋನೇಷ್ಯಾಕ್ಕೆ ಕರೆದುಕೊಂಡು ಹೋಗಿದ್ದ. ಆತನ ಮೇಲೆ ನಂಬಿಕೆ ಇಟ್ಟು ಜುಲೈ 219ರಲ್ಲಿ 3,50,000 ಹಾಗೂ ಫೆಬ್ರವರಿ 2020ರಲ್ಲಿ 2.50 ಲಕ್ಷ ನೀಡಿದ್ದಾಗಿ ಅಬ್ದುಲ್ ಅಜೀಜ್ ಹೇಳಿದ್ದಾರೆ.
ಫೆಬ್ರವರಿಯಿಂದ ಸೆಪ್ಟೆಂಬರ್ 2020ರವರೆಗೂ ಮಂಗಳೂರು ಇತರ ಮೂವರು ಯುವಕರು ಇಂಡೋನೇಷ್ಯಾದಲ್ಲಿ ರೂಮ್ ನಲ್ಲಿದ್ದೇವು. ಅಲ್ಲಿ ಅಕ್ರಮ ವಾಸ್ತವ್ಯ ಆರೋಪದ ಮೇರೆಗೆ ಸೆಪ್ಟೆಂಬರ್ ನಲ್ಲಿ ಬಂಧನಕ್ಕೊಳಗಾಗಿ 14 ದಿನಗಳ ಕಾಲ ಜೈಲಿನಲ್ಲಿ ಉಳಿಯಬೇಕಾಯಿತು. ಆದಾಗ್ಯೂ. ಕಾನೂನು ಹೋರಾಟದ ನಂತರ ಬಿಡುಗಡೆಯಾಗಿದ್ದಾಗಿ ನಿಯಾಜ್ ಹೇಳಿಕೊಂಡಿದ್ದಾರೆ. ಈ ನಡುವೆ ಮಂಗಳೂರಿಗೆ ವಾಪಸ್ಸಾಗಲು ತಮ್ಮ ತಂದೆ 8 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಶಮ್ಶೀರ್ ರಿಜ್ವಾನ್, ಉದ್ಯೋಗಕಾಂಕ್ಷಿಗಳಿಂದ ಸಂಗ್ರಹಿಸಿದ ಹಣವನ್ನು ಇಂಡೋನೇಷ್ಯಾದಲ್ಲಿ ಟ್ರಾವೆಲ್ ಏಜೆಂಟ್ ಅವರೊಂದಿಗೆ ಹಂಚಿಕೊಳ್ಳುತ್ತಿದ್ದ ಎಂದು ತಿಳಿಸಿದ್ದಾರೆ. ಈ ನಡುವೆ ಈ ವರ್ಷದ ಜನವರಿ 21 ರಂದು ಉಳ್ಳಾಲ್ ನಲ್ಲಿ ಆತನನ್ನು ಭೇಟಿಯಾದಾಗ ಕೇವಲ 2 ಲಕ್ಷ ಹಿಂದಿರುಗಿಸುವುದಾಗಿ ಭರವಸೆ ನೀಡಿರುವುದಾಗಿ ನಿಯಾಜ್ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.