ರಾಜ್ಯಪಾಲರದ್ದು ತೌಡು ಕುಟ್ಟುವ ಭಾಷಣ: ಸಿದ್ದರಾಮಯ್ಯ
ಬೆಂಗಳೂರು ಫೆ.10 : ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಅವರ ಭಾಷಣಕ್ಕೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, `ರಾಜ್ಯಪಾಲರ ಭಾಷಣ ತೌಡು ಕುಟ್ಟಿದಂತೆ ಕಾಣಿಸುತ್ತಿದೆ. ಇದು ಬೂಸಾ ಅಥವಾ ತೌಡು ಕುಟ್ಟುವ ಭಾಷಣ’ ಎಂದು ಟೀಕಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, `ಭತ್ತ ಕುಟ್ಟಿದರೆ ಅಕ್ಕಿ ಬರುತ್ತದೆ. ತೌಡು ಕುಟ್ಟಿದರೆ ಬರಿ ಉಬ್ಬಲು ಬರುತ್ತದೆ. ಯಾವ ಸಾಧನೆ ಮಾಡದಿರುವುದನ್ನು ಸರ್ಕಾರವೇ ಸ್ವತಃ ಒಪ್ಪಿಕೊಂಡಿದೆ. ಹೀಗಾಗಿ, ಸರ್ಕಾರ ಸಿದ್ಧಪಡಿಸಿದ ಈ ಭಾಷಣವನ್ನು ಬೂಸಾ ಅಥವಾ ತೌಡು ಕುಟ್ಟುವ ಭಾಷಣವೆಂದು ಕರೆಯುತ್ತೇನೆ’ ಎಂದು ವ್ಯಂಗ್ಯವಾಡಿದ್ದಾರೆ.
`ಒಟ್ಟಾರೆ, ಬಿಜೆಪಿ ಸರ್ಕಾರವು ನಾಲ್ಕು ವರ್ಷಗಳಲ್ಲಿ ಏನನ್ನೂ ಮಾಡಿಲ್ಲ. ಭ್ರಷ್ಟಾಚಾರ, ಧರ್ಮ-ಜಾತಿ ಸಂಘರ್ಷವನ್ನು ಬೆಳೆಸಿದ್ದು ಹೊರತುಪಡಿಸಿದರೆ ಬೇರೆ ಸಾಧನೆಗಳನ್ನು ಮಾಡಿಲ್ಲ ಎನ್ನುವುದನ್ನು ರಾಜ್ಯಪಾಲರ ಭಾಷಣದಲ್ಲಿ ಒಪ್ಪಿಕೊಳ್ಳಲಾಗಿದೆ. ತನ್ನ ವೈಫಲ್ಯವನ್ನು ಒಪ್ಪಿಕೊಂಡಿರುವುದಕ್ಕೆ ರಾಜ್ಯಪಾಲರು ಮತ್ತು ಸರ್ಕಾರವನ್ನು ಅಭಿನಂದಿಸುತ್ತೇನೆ’ ಎಂದು ಲೇವಡಿ ಮಾಡಿದ್ದಾರೆ.
`ರಾಜ್ಯಪಾಲರ ಮೂಲಕ ಸರ್ಕಾರ ಹೇಳಿಸಿರುವ ಅನೇಕ ಕಾರ್ಯಕ್ರಮಗಳು ಕಾಂಗ್ರೆಸ್ ಸರ್ಕಾರದ ಅವಧಿಯ ಕಾರ್ಯಕ್ರಮಗಳಾಗಿವೆ. ರಾಜ್ಯದ ಆದಾಯಕ್ಕೆ ಬೆಂಗಳೂರಿನ ಕೊಡುಗೆ ಶೇ.70ಕ್ಕಿಂತ ಹೆಚ್ಚು. ಆದರೆ, ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಪಟ್ಟಂತೆ ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟವಾದ ಯಾವುದೇ ಯೋಜನೆಗಳು ಇಲ್ಲ. ರಾಜ್ಯಪಾಲರು ತಮ್ಮ ಭಾಷಣದ ಪ್ಯಾರಾ ಸಂಖ್ಯೆ 39ರಲ್ಲಿ ನಾಡಪ್ರಭು ಕೆಂಪೇಗೌಡ, ಅರ್ಕಾವತಿ, ಡಾ.ಶಿವರಾಮ ಕಾರಂತ ಬಡಾವಣೆಗಳ ಪ್ರಸ್ತಾಪಿಸಿದ್ದಾರೆ. ಈ ಎಲ್ಲ ಬಡಾವಣೆಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಾರಂಭಗೊಂಡಿದ್ದವು’ ಎಂದು ವಿವರಿಸಿದ್ದಾರೆ.
‘ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ರಾಜ್ಯಪಾಲರ ಭಾಷಣದಲ್ಲಿ ಯಾವುದೇ ಉಲ್ಲೇಖಗಳಿಲ್ಲ. ಸರ್ಕಾರ ಯಾವುದೇ ಕಾರ್ಯಕ್ರಮಗಳನ್ನು ರೂಪಿಸಿಲ್ಲ ಎನ್ನುವುದು ಸ್ಪಷ್ಟವಾಗಿದೆ. ರಾಜ್ಯವು ಇಂದು ಅನುಭವಿಸುತ್ತಿರುವ ದೊಡ್ಡ ಸಮಸ್ಯೆ ಭ್ರಷ್ಟಾಚಾರದ್ದು. ಈ ಸಮಸ್ಯೆಯನ್ನು ಹೋಗಲಾಡಿಸಲು ಸರ್ಕಾರ ಏನು ಕ್ರಮ ಕೈಗೊಂಡಿದೆ ಎನ್ನುವ ಬಗ್ಗೆ ಒಂದೂ ಮಾತು ಪ್ರಸ್ತಾಪಿಸಿಲ್ಲ. ಆದ್ದರಿಂದ, ಸರ್ಕಾರ ಭ್ರಷ್ಟಾಚಾರದ ಪರವಾಗಿರುವುದನ್ನು ರಾಜ್ಯಪಾಲರ ಭಾಷಣವು ದೃಢೀಕರಿಸುತ್ತಿದೆ’ ಎಂದು ಹೇಳಿದ್ದಾರೆ.