`ದಲಿತರನ್ನು ಮುಖ್ಯಮಂತ್ರಿ ಮಾಡುವುದಾಗಿ ಘೋಷಿಸಿ, ಆಗ ಬಿಜೆಪಿಗೆ ಮತ ಹಾಕುತ್ತೇವೆ’-ದಲಿತ ಮುಖಂಡರ ಸವಾಲು
ಕೋಲಾರ ಫೆ.10 : ‘ಬಿಜೆಪಿಯಲ್ಲಿ ಬ್ರಾಹ್ಮಣರು, ಲಿಂಗಾ ಯತರನ್ನೇ ಏಕೆ ಮುಖ್ಯಮಂತ್ರಿ ಮಾಡುತ್ತೀರಿ?’ ಎಂದು ದಲಿತ ಮುಖಂಡರೊಬ್ಬರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ಪ್ರಶ್ನೆ ಕೇಳಿದ್ದಾರೆ.
ಕೋಲಾರ ನಗರದಲ್ಲಿ ನಿನ್ನೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನಾ ವೇದಿಕೆಯು ಆಯೋಜಿಸಿದ್ದ ‘ಅಂತ್ಯೋದಯದಿಂದ ಸರ್ವೋದಯ’ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ದಲಿತ ಮುಖಂಡರೊಬ್ಬರು ಈ ಪ್ರಶ್ನೆಯನ್ನು ಸಿಟಿ ರವಿ ಅವರಿಗೆ ಕೇಳಿದ್ದಾರೆ. ಈ ವೇಳೆ ‘ದಲಿತರನ್ನು ಮುಖ್ಯಮಂತ್ರಿ ಮಾಡುವುದಾಗಿ ಘೋಷಿಸಿ, ಆಗ ಬಿಜೆಪಿಗೆ ಮತ ಹಾಕುತ್ತೇವೆ’ ಎಂದು ಮತ್ತೊರ್ವ ದಲಿತ ಮುಖಂಡ ಸವಾಲು ಎಸೆದಿದ್ದಾರೆ.
ಈ ವೇಳೆ ದಲಿತ ಮುಖಂಡರ ಪ್ರಶ್ನೆಗೆ ಉತ್ತರಿಸಿದ ಶಾಸಕ ಸಿ.ಟಿ.ರವಿ ಅವರು, `ನಾಯಕತ್ವ ಬೆಳೆಯುತ್ತಾ ಎಲ್ಲಾ ಸಮುದಾಯಕ್ಕೂ ಸಮನಾದ ಅವಕಾಶ ಸಿಗಲಿದೆ. ಜಾತಿ ಆಧಾರದಲ್ಲಿ ಅಲ್ಲ. ಬದಲಾಗಿ ನೀತಿ, ನಿಯತ್ತು ಹಾಗೂ ನಿಷ್ಠೆಯಿಂದ ಇದ್ದವರಿಗೆ ಅವಕಾಶ ಒಲಿಯಲಿದೆ’ ಎಂದರು.
ಇದೇ ವೇಳೆ `ಮೀಸಲಾತಿ ವಿರೋಧಿ ಅಲ್ಲ ಎನ್ನುತ್ತೀರಿ, ಏಕೆ ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದ್ದೀರಿ? ದೆಹಲಿಯ ಜಂತರ್ ಮಂತರ್ ಬಳಿ ನಿಮ್ಮದೇ ಹಿಂದೂ ಕಾರ್ಯಕರ್ತರು ಸಂವಿಧಾನದ ಪ್ರತಿ ಸುಟ್ಟಾಗ ಏನು ಮಾಡಿದಿರಿ? ನಾವು ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ರಾಜ್ಯದ ಬಿಜೆಪಿ ಸಂಸದರೊಬ್ಬರು ಹೇಳಿದ್ದು ಏಕೆ’ ಎಂದು ಮತ್ತೊಬ್ಬರು ಮುಖಂಡರು ಪ್ರಶ್ನಿಸಿದರು.