ಆಂಧ್ರಪ್ರದೇಶದಲ್ಲಿ ತೈಲಗಾರದ ಟ್ಯಾಂಕ್ ಸ್ವಚ್ಚಗೊಳಿಸುವ ವೇಳೆ ದುರಂತ – 7 ಮಂದಿ ಕಾರ್ಮಿಕರು ಮೃತ್ಯು

ಕಾಕಿನಾಡ, ಫೆ.9 : ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯ ಪೆದ್ದಾಪುರಂ ಮಂಡಲದ ಜಿ.ರಾಗಂಪೇಟೆಯಲ್ಲಿರುವ ಅಂಬಟಿ ಸುಬ್ಬಣ್ಣ ತೈಲ ಕಾರ್ಖಾನೆಯಲ್ಲಿ ತೈಲ ಸಂಗ್ರಹದ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ಏಳು ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಕಾರ್ಮಿಕರು 24 ಅಡಿ ಆಳದ ತೈಲ ಟ್ಯಾಂಕರ್ ಅನ್ನು ಸ್ವಚ್ಛಗೊಳಿಸಲು ಒಬ್ಬೊಬ್ಬರಾಗಿ ಇಳಿದಿದ್ದರು. ಬಳಿಕ ಅಲ್ಲಿಯೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮೃತರರು ಕೇವಲ 10 ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದರು. ಇವರಲ್ಲಿ ಐವರು ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಪಾಡೇರು ನಿವಾಸಿಗಳಾಗಿದ್ದು, ಇಬ್ಬರು ಅದೇ ಮಂಡಲದ ಪುಲಿಮೇರು ಗ್ರಾಮದವರು ಎಂದು ತಿಳಿದು ಬಂದಿದೆ.

ಈ ನಡುವೆ ಘಟನೆಗೆ ಸಂಬಂಧಿಸಿ ಕಾರ್ಖಾನೆ ಆಡಳಿತ ಮಂಡಳಿ ಅಗತ್ಯ ಮುಂಜಾಗ್ರತೆ ವಹಿಸದಿರುವುದು ದುರಂತಕ್ಕೆ ಕಾರಣವಾಗಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

ಇನ್ನು ಸ್ಥಳಕ್ಕೆ ಭೇಟಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ರವೀಂದ್ರನಾಥ ಬಾಬು, ಜಿಲ್ಲಾಧಿಕಾರಿ ಕೃತಿಕಾ ಶುಕ್ಲಾ ಅವರು ಪರಿಶೀಲನೆ ನಡೆಸಿದ್ದಾರೆ. ಹಾಗೂ ತೈಲ ಕಾರ್ಖಾನೆಯ ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!