ಶಿವಮೊಗ್ಗ : ವಿಮಾನ ನಿಲ್ದಾಣದಲ್ಲಿ ಉದ್ಯೋಗದ ಆಮಿಷ: ಯುವಕನಿಗೆ 72 ಸಾವಿರ ರೂ. ವಂಚನೆ
ಶಿವಮೊಗ್ಗ, ಫೆ.8: ವಿಮಾನ ನಿಲ್ದಾಣದಲ್ಲಿ ಕೆಲಸಕ್ಕೆ ನೇಮಕ ಆಗಿದ್ದೀರಿ ಎಂಬ ಅಪರಿಚಿತ ಕರೆಯನ್ನು ನಂಬಿದ ಯುವಕನೋರ್ವ 72 ಸಾವಿರ ರೂ. ವಂಚನೆಗೆ ಒಳಗಾಗಿರುವ ಘಟನೆ ಶಿವಮೊಗ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೊಳಲೂರಿನ ಯುವಕ ಮೊಬೈಲ್ ಫೋನ್ ನಲ್ಲಿ ಏರ್ ಪೋರ್ಟ್ ಅಥಾರಿಟಿ ಅಪ್ಲಿಕೇಶನ್ ತೆರೆದು ತನ್ನ ಆಧಾರ್ ಕಾರ್ಡ್, ಮೊಬೈಲ್ ನಂಬರ್, ಹೆಸರು ದಾಖಲಿಸಿದ್ದರು. ಫೆ.2ರಂದು ಮಧ್ಯಾಹ್ನ ಈ ಯುವಕನಿಗೆ ಅಪರಿಚಿತ ಮೊಬೈಲ್ ನಂಬರಿನಿಂದ ಮಹಿಳೆಯೊಬ್ಬರು ಕರೆ ಮಾಡಿ, ತನ್ನನ್ನು ಮೋನಿಕಾ ಎಂದು ಪರಿಚಯಿಸಿಕೊಂಡಿದ್ದಾಳೆ. ತಾನು ಶಿವಮೊಗ್ಗ ಏರ್ ಪೋರ್ಟ್ ಅಥಾರಿಟಿಯ ಎಚ್.ಆರ್ ಎಂದು ಹೇಳಿ ಯುವಕನನ್ನು ನಂಬಿಸಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೀವು ಗ್ರೌಂಡ್ ಸ್ಟಾಫ್ ಆಗಿ ನೇಮಕವಾಗಿದ್ದೀರಿ. ಇದರ ರಿಜಿಸ್ಟ್ರೇಷನ್ ಗೆ ಹಣ ಪಾವತಿಸಬೇಕು ಎಂದು ತಿಳಿಸಿದ್ದಾಳೆ. ಹಾಗೂ ಹಂತ ಹಂತವಾಗಿ ಫೋನ್ ಪೇ ಮೂಲಕ 72,900 ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾಳೆ. ಆದರೆ ಬಳಿಕ ತಾನು ವಂಚನೆಗೊಳಾಗಿರುವುದು ತಳಿದು ಯುವಕ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.