ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯ 9.5 ಲಕ್ಷ ಕೋಟಿಯಷ್ಟು ಇಳಿಕೆ

ನವದೆಹಲಿ ಫೆ.7 : ಅಮೆರಿಕದ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ರಿಸರ್ಚ್ ವರದಿ ಪ್ರಕಟವಾದ ಬಳಿಕ ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯ ಇಳಿಕೆ ಕಾಣುತ್ತಲೇ ಇದೆ. ಇದೀಗ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ನಿನ್ನೆಯ ವಹಿವಾಟಿನ ಅಂತ್ಯದ ವೇಳೆಗೆ 9.5 ಲಕ್ಷ ಕೋಟಿಯಷ್ಟು ಇಳಿಕೆ ಕಂಡಿದೆ ಎಂದು ವರದಿಯಾಗಿದೆ.

ಸ್ಟಾಕ್ಸ್‍ಬಾಕ್ಸ್ ಕಂಪನಿಯ ಸಂಶೋಧನಾ ಮುಖ್ಯಸ್ಥ ಮನಿಷ್ ಚೌಧರಿ ಅವರು ನೀಡಿರುವ ಮಾಹಿತಿ ಪ್ರಕಾರ, ಜನವರಿ 24ರಿಂದ ಫೆಬ್ರುವರಿ 6ರವರೆಗೆ ನಡೆದಿರುವ 9 ದಿನಗಳ ವಹಿವಾಟಿನಲ್ಲಿ ಅದಾನಿ ಸಮೂಹದ ಕಂಪನಿಗಳ ಷೇರುಗಳ ಒಟ್ಟು ಮಾರುಕಟ್ಟೆ ಮೌಲ್ಯದಲ್ಲಿ ಶೇಕಡ 49ರಷ್ಟು (9.5 ಲಕ್ಷ ಕೋಟಿ) ಇಳಿಕೆ ಆಗಿದೆ. ಹಾಗೂ ಹಿಂಡನ್‍ಬರ್ಗ್ ರಿಸರ್ಚ್‍ನ ವರದಿಯು ಅದಾನಿ ಸಮೂಹದ ಕಂಪನಿಗಳ ಷೇರುಗಳನ್ನು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾಗುವಂತೆ ಮಾಡಿತು. ಅದಾನಿ ಎಂಟರ್ ಪ್ರೈಸ್ ತನ್ನ ಎಫ್‍ಪಿಒ ರದ್ದು ಮಾಡಿದ ನಿರ್ಧಾರವು ಮತ್ತಷ್ಟು ಏರಿಳಿತಕ್ಕೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.

ಇನ್ನು ಅದಾನಿ ಸಮೂಹವು ಒಂದಿಷ್ಟು ಸಾಲವನ್ನು ಅವಧಿಗೆ ಮೊದಲೇ ತೀರಿಸಲಿದೆ ಎಂಬ ಮಾಹಿತಿಯು ಕೆಲವು ಕಂಪನಿಗಳ ಷೇರು ಮೌಲ್ಯದಲ್ಲಿ ಸ್ಥಿರತೆ ಮೂಡಿಸಿದಂತೆ ಕಾಣುತ್ತಿದೆ ಎಂದು ಎಚ್‍ಡಿಎಫ್‍ಸಿ ಸೆಕ್ಯುರಿಟೀಸ್‍ನ ರಿಟೇಲ್ ರಿಸರ್ಚ್‍ನ ಮುಖ್ಯಸ್ಥ ದೀಪಕ್ ಜನವಿ ತಿಳಿಸಿದ್ದಾರೆ.

ನಿನ್ನೆ ವಹಿವಾಟಿನ ಅಂತ್ಯದ ಹೊತ್ತಿಗೆ ಅದಾನಿ ಸಮೂಹದ 10 ಕಂಪನಿಗಳಲ್ಲಿ ಆರು ಕಂಪನಿಗಳ ಷೇರು ಮೌಲ್ಯ ಇಳಿಕೆ ಕಂಡಿತು. ನಾಲ್ಕು ಕಂಪೆನಿಗಳು ಸಕಾರಾತ್ಮಕವಾಗಿ ವಹಿವಾಟು ಅಂತ್ಯಗೊಳಿಸಿದವು. ಆದರೆ ದೇಶದ ಷೇರುಪೇಟೆಗಳಲ್ಲಿ ಸೋಮವಾರ ನಕಾರಾತ್ಮಕ ವಹಿವಾಟು ನಡೆಯಿತು. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 335 ಅಂಶ ಇಳಿಕೆ ಕಂಡರೆ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 89 ಅಂಶ ಇಳಿಕೆ ಕಂಡಿತು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!