ಶಸ್ತ್ರ ಚಿಕಿತ್ಸೆಯ ಬಳಿಕ 85 ಶ್ವಾನಗಳು ಸಾವು- ವೈದ್ಯರ ವಿರುದ್ದ ದೂರು
ಬೆಂಗಳೂರು, ಫೆ.6 : ರಾಜ್ಯ ರಾಜಧಾನಿಯಲ್ಲಿ ಬರ್ತ್ ಕಂಟ್ರೋಲ್ ಶಸ್ತ್ರ ಚಿಕಿತ್ಸೆಯ ಬಳಿಕ 85 ಶ್ವಾನಗಳು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದ್ದು, ಈ ಬಗ್ಗೆ ವೈದ್ಯರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ನೆವೀನಾ ಕಾಮತ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಜನನ ನಿಯಂತ್ರಣ ಶಸ್ತ್ರ ಚಿಕಿತ್ಸೆ ನಂತರ ಶ್ವಾನಗಳ ಕಾಳಜಿ ಸರಿಯಾಗಿ ವಹಿಸದೆ ತಂದು ಬೀದಿಯಲ್ಲಿ ಬಿಟ್ಟಿರುವದರಿಂದ ಶ್ವಾನಗಳು ಸಾಯುತ್ತಿದ್ದು, ಈ ವಿಚಾರವನ್ನು ನಾಯಿಗಳಿಗೆ ಆಹಾರ ನೀಡುವವರು ನನಗೆ ತಿಳಿಸಿದ್ದಾರೆ. ಇದಲ್ಲದೆ ಬಿಬಿಎಂಪಿ ಎಬಿಸಿ(ಶ್ವಾನ) ನಿಯಮ, 2001 ಕಾಯ್ದೆ ಅಡಿಯಲ್ಲಿ ಬರುವ ನಿಯಮಗಳನ್ನು ಪಾಲಿಸದೆ 85 ಶ್ವಾನಗಳು ಬಲಿಯಾಗಿವೆ ಎಂದು ಆರೋಪಿಸಿದ್ದಾರೆ. ಹಾಗೂ ಸೋಂಕುಗಳನ್ನು ತಡೆಯುವ ಮತ್ತು ರೋಗ ನಿರೋಧಕ ವ್ಯಾಕ್ಸೀನ್ ಗಳು ಸಿಗದೆ ಹಲವಾರು ಶ್ವಾನಗಳು ಬಲಿಯಾಗಿದೆ ಇದರೊಂದಿಗೆ ಶಸ್ತ್ರ ಚಿಕಿತ್ಸೆ ನಂತರ ಸರಿಯಾದ ವೈದ್ಯಕೀಯ ಸಹಾಯ ಸಿಗದೆ ಶ್ವಾನಗಳು ಸಾಯುತ್ತಿವೆ. ಪಶೋಸಂಗೋಪನಾ ಇಲಾಖೆಯ ವೈದ್ಯರು ಹಾಗೂ ಪಶೋಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ ಎಂ.ಜಿ ಹಳ್ಳಿ ಶಿವರಾಂ ಅವರು ಇದಕ್ಕೆ ನೇರ ಹೊಣೆ ಎಂದು ದೂರಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.