ಬೆಂಗಳೂರು : “ಇಂಡಿಯಾ ಎನರ್ಜಿ ವೀಕ್ 2023” ಉದ್ಘಾಟನೆ
ಬೆಂಗಳೂರು, ಫೆ.6 : ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು “ಇಂಡಿಯನ್ ಎನರ್ಜಿ ವೀಕ್-2023″ನ್ನು ಉದ್ಘಾಟಿಸಿದರು.
ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಕರ್ನಾಟಕದಲ್ಲಿ 15,000 ಮೆಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದಿಸಲಾಗುತ್ತಿದ್ದು, ಮುಂದಿನ 5 ವರ್ಷ ನವೀಕರಿಸಬಹುದಾದ ಇಂಧನ ಉತ್ಪಾದನೆ ಕ್ಷೇತ್ರದಲ್ಲಿ ಮಹತ್ವಯುತವಾಗಿದೆ. ದೇಶದ ಶೇ. 50 ರಷ್ಟು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ನವೀಕರಿಸಬಹುದಾದ ಇಂಧನವನ್ನು ಸಂಗ್ರಹಿಸಲು ಪಂಪ್ ಸ್ಟೋರೇಜ್ ಸೇರಿದಂತೆ ವಿವಿಧ ರೀತಿಯ ಸಂಗ್ರಹಣೆಯತ್ತ ರಾಜ್ಯ ಗಮನ ಹರಿಸುತ್ತಿದೆ ಎಂದರು.
ಕಳೆದ ತಿಂಗಳು ಬಂಡವಾಳ ಹೂಡಿಕೆ ಸಮಾವೇಶ ಆಯೋಜಿಸಲಾಗಿದ್ದು, ಸುಮಾರು 9 ಉದ್ದಿಮೆಗಳು ಗ್ರೀನ್ ಹೈಡ್ರೊಜನ್ ವಿದ್ಯುತ್ ಉತ್ಪಾದನೆಗೆ 3 ಲಕ್ಷ ಕೋಟಿ ಬಂಡವಾಳದಲ್ಲಿ ಸುಮಾರು 2 ಲಕ್ಷ ಕೋಟಿ ನವೀಕರಿಸಬಹುದಾದ ಇಂಧನ ಉತ್ಪಾದನೆ ಕ್ಷೇತ್ರಕ್ಕೆ ಅವಕಾಶ ಕಲ್ಪಿಸಿದೆ. ಕರ್ನಾಟಕ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ರಾಜ್ಯದಲ್ಲಿ ಅತ್ಯಧಿಕ ಸಂಖ್ಯೆಯ ಸಂಶೋಧನೆ ಇವಿ ವಾಹನ ಹಾಗೂ ಇವಿ ಸಾರಿಗೆ ವಾಹನಗಳ ಕ್ಷೇತ್ರದಲ್ಲಾಗಿವೆ. ಕರ್ನಾಟವನ್ನು ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಯಲ್ಲಿ ದೇಶದಲ್ಲಿಯೇ ನಂ.1 ಆಗಿಸುವ ಗುರಿಯಿದೆ. ಇದಕ್ಕೆ ಪೂರಕವಾಗಿ ಬಂಡವಾಳ ಸ್ನೇಹಿ ಇವಿ ನೀತಿಯನ್ನು ರಾಜ್ಯದಲ್ಲಿ ತರಲಾಗಿದೆ ಎಂದರು.
ಹಾಗೂ ಬಯೋ ಇಂಧನವಾದ ಎಥನಾಲ್ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿ ನಿಲ್ಲುತ್ತದೆ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬು ಅರಿಯುವ ಘಟಕಗಳಿವೆ. ರಾಜ್ಯದ ಯುವ ಉದ್ಯಮಿ ವಿಜಯ್ ನಿರಾಣಿ ಅವರು ದೇಶದಲ್ಲಿಯೇ ದೊಡ್ಡ ಪ್ರಮಾಣದ ಎಥನಾಲ್ ಉತ್ಪಾದನೆಯಲ್ಲಿ ನಿರತರಾಗಿದ್ದಾರೆ. ಭಾರತದ ಎಥನಾಲ್ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ದೊಡ್ಡ ಕೊಡುಗೆಯನ್ನು ನೀಡಲಿದೆ. ಪ್ರಧಾನಿ ಮೋದಿಯವರ ಅಮೃತ ಕಾಲದಲ್ಲಿ ಇಂಧನ ಕ್ಷೇತ್ರದ ಅಭಿವೃದ್ಧಿಗಾಗಿ ನಮ್ಮ ಗುರಿ ಬಹಳ ಮಹತ್ವಯುತವಾದದ್ದು. ಗರಿಷ್ಠ ಇಂಧನ ಕನಿಷ್ಠ ಮಾಲಿನ್ಯ ಎಂಬ ಘೋಷವಾಕ್ಯದ ಗುರಿಯನ್ನು ಸಾಧಿಸಲಾಗುವುದು ಎಂದು ತಿಳಿಸಿದರು.
ಇಂಧನ ಸಂಶೋಧನೆ ಹಾಗೂ ಸಾಮಥ್ರ್ಯವುಳ್ಳ ಬೆಂಗಳೂರಿನಲ್ಲಿ ಇಂಡಿಯಾ ಇಂಧನ ಸಪ್ತಾಹ -2023 ನ್ನು ಆಯೋಜಿಸಿರುವುದಕ್ಕೆ ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಇಂಧನ ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸಿದ ಅವರು, ಕೊರೊನಾ ನಂತರ ಜೀವನದ ವ್ಯಾಖ್ಯಾನ ಬದಲಾಗಿದ್ದು, ಹೊಸ ಗುರಿ, ಸಾಧನೆ ಹಾಗೂ ನಿಲುವುಗಳೂ ಬದಲಾವಣೆಗಳಾಗಿವೆ. ಗುಜರಾತ್ ರಾಜ್ಯದ ಯಶಸ್ವಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ, ಇಂಧನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಪ್ರಧಾನಿ ಮೋದಿಯವರು ತಂದಿದ್ದಾರೆ. ಆ ಅನುಭವದಿಂದ ದೇಶದ ಇಂಧನ ಕ್ಷೇತ್ರದಲ್ಲಿ ಮಹತ್ವಪೂರ್ಣ ಹಾಗೂ ಮಾದರಿ ಬದಲಾವಣೆಗಳಿಗೆ ಕಾರಣರಾಗಿದ್ದಾರೆ. ಇಂಧನ ಕ್ಷೇತ್ರದಲ್ಲಿ ಹೊಸ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಮಾಲಿನ್ಯ ರಹಿತ ವಿದ್ಯುತ್ ಉತ್ಪಾದನೆ ದೊಡ್ಡ ಸವಾಲು. ಪ್ರಧಾನಿ ಮೋದಿಯವರು 2046 ರೊಳಗೆ ಮಾಲಿನ್ಯ ರಹಿತ ವಿದ್ಯುತ್ ಉತ್ಪಾದನೆಯ ಗುರಿ ಹೊಂದಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಇಂಧನ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ. ಸಿಂಗ್ ಮೊದಲಾದವರು ಉಪಸ್ಥಿತರಿದ್ದರು.